ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಮೂರನೇ ಪರ್ಯಾಯಕ್ಕೆ ಸಿಕ್ಕ ಮನ್ನಣೆಯನ್ನು ಸೂಚಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ಹಾಗೂ ಕೋಯಿಕ್ಕೋಡ್ ವಲಯ ಪ್ರಭಾರಿ ವಿ.ಕೆ. ಸಜೀವನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾ ಬಿಜೆಪಿ ಕಚೇರಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಭವನದಲ್ಲಿ ನಡೆದ ಪಕ್ಷದ ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೇರಳದಲ್ಲಿ 30 ಲಕ್ಷ ಮತಗಳು ಮತ್ತು ಮೂವರು ಶಾಸಕರು ಲಭಿಸಿರುವುದು, ರಾಜ್ಯದ ಜನತೆ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಪುರಾವೆಯಾಗಿದೆ. ಈ ಯಶಸ್ಸು ಬಿಜೆಪಿ ಮುನ್ನಡೆಸುತ್ತಿರುವ ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಮನ್ನಣೆಯಾಗಿದ್ದು, ಭವಿಷ್ಯದಲ್ಲಿ ಚುನಾವಣಾ ಹೋರಾಟವು ಎನ್‍ಡಿಎ ಮೈತ್ರಿಕೂಟ ಮತ್ತು 'ಇಂಡಿ' ಮೈತ್ರಿಕೂಟದ ನಡುವೆ ಮಾತ್ರ ಅಸ್ತಿತ್ವದಲ್ಲಿರಲಿದೆ. ಕೇರಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನ ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ಬೂತ್ ಮಟ್ಟದ ಚಟುವಟಿಕೆಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ವಿ.ಕೆ. ಸಜೀವನ್ ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಕೋಯಿಕ್ಕೋಡ್ ವಲಯ ಸಂಘಟನಾ ಕಾರ್ಯದರ್ಶಿ ಜಿ. ಕಾಶೀನಾಥ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಸವಿತಾ ಟೀಚರ್, ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್ ಮತ್ತು ಮನುಲಾಲ್ ಮೇಲತ್ ಉಪಸ್ಥಿತರಿದ್ದರು.
ಕನ್ನಡ ಭಾಷೆಯ ಮೇಲಿನ ನಿರ್ಲಕ್ಷ್ಯವನ್ನು ಕೊನೆಗಾಣಿಸಬೇಕು, ಪರಿಸರ ಮಾಲಿನ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಸರ್ಕಾರಿ ವೈದ್ಯಕೀಯ ಕಾಲೇಜನ್ನು ತಕ್ಷಣವೇ ಕಾರ್ಯಾರಂಭಿಸಬೇಕು ಹಾಗೂ ಮಾದಕ ದ್ರವ್ಯ ವಿರೋಧಿ ಚಟುವಟಿಕೆಗಳನ್ನು ಬಲಪಡಿಸಬೇಕು ಎಂದು ಸಭೆಯಲ್ಲಿ ನಿರ್ಣಯಗಳ ಮೂಲಕ ಆಗ್ರಹಿಸಲಾಯಿತು.



