ಕಾಸರಗೋಡು: ಕೇರಳ ಸರ್ಕಾರ ಜಾರಿಗೊಳಿಸಿರುವ ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡುವುದರ ಜತೆಗೆ ಮಸೂದೆಯನ್ನು ಮರು ಪರಿಶೀಲಿಸುವಂತೆ ಕಾಸರಗೋಡಿನ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಸರ್ಕಾರವನ್ನು ಆಗ್ರಹಿಸಿದೆ.
ಈಗಾಗಲೇ ಮಸೂದೆ ವಿರುದ್ಧ ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಭಾಷಾ ಅಲ್ಪಸಂಖ್ಯಾಕರ ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸುತ್ತಿದ್ದಾರೆ. ಸಂವಿಧಾನವು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ ಹಕ್ಕುಗಳನ್ನು ವ್ಯವಸ್ಥಿತಗೊಳಿಸಿ, ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಭಾಷಾ ಅಲ್ಪಸಂಖ್ಯಾಕರು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ-ಕಾನೂನು ರಚಿಸಲು ಆಯಾ ರಾಜ್ಯ ಮುಂದಾಗಬೇಕು. ಭಾಷಾ ಅಲ್ಪ ಸಂಖ್ಯಾಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಒದಗಿಸಲು ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿರುತ್ತದೆ. ಆಯಾ ರಾಜ್ಯ ಸರ್ಕಾರ ರಚಿಸುವ ಭಾಷಾ ನೀತಿ ದೇಶ ರಾಜ್ಯ ಅಥವಾ ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಾರದು ಎಂಬುದು ಸಂವಿಧಾನದ ಮೂಲತತ್ವ ಆಶಯವಾಗಿದೆ. ಕೇರಳದಲ್ಲಿ ಭಾಷಾ ಅಲ್ಪಸಂಖ್ಯಾತರ ಹಿತಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಸೂದೆ ಜಾರಿಗೊಳಿಸದಿರುವಂತೆ ಪ್ರತಿಷ್ಠಾನ ಆಗ್ರಹಿಸಿದೆ.
ಸಂವಿಧಾನದ ಮೂಲತತ್ತ್ವಕ್ಕೆ ವಿರುದ್ಧವಾಗಿರುವ ಮಸೂದೆ ಕುರಿತು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ನೇತೃತ್ವದಲ್ಲಿ ಕೇರಳ ಸರಕಾರದ ನೂತನ ಮುಖ್ಯಮಂತ್ರಿಗಳಿಗೆ ವಿವರವಾದ ಮನವಿ ಪತ್ರವನ್ನು ನೀಡುವುದರ ಜತೆಗೆ ಕೇರಳ ಸರ್ಕಾರಕ್ಕೆ ಮರು ಪರಿಶೀಲಿಸಲು ಕಾಸರಗೋಡು ಜಿಲ್ಲೆಯಿಂದ ಚುನಾಯಿತರಾದ ನೂತನ ಶಾಸಕರ ನೇತೃತ್ವದಲ್ಲಿ ಕಾಸರಗೋಡಿನ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಉನ್ನತಮಟ್ಟದ ನಿಯೋಗವನ್ನು ಕೊಂಡೊಯ್ಯಲು ನಿರ್ಧರಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

