ವಶಕ್ಕೆ ಪಡೆದವರಲ್ಲಿ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸ್ಥಳೀಯ ಸದಸ್ಯ ದಿನೇಶ್ ಬಿವಾಲ್ ಹಾಗೂ ಆತನ ಸಹೋದರ ಮಂಗಿಲಾಲ್ ಬಿವಾಲ್ ಕೂಡ ಸೇರಿದ್ದಾರೆ.
ದಿನೇಶ್ ಬಿವಾಲ್ ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಿಜೆಪಿ ಶಾಸಕರು ಮತ್ತು ರಾಜ್ಯ ಮಟ್ಟದ ನಾಯಕರೊಂದಿಗಿನ ಫೊಟೋಗಳು ಹೆಚ್ಚಾಗಿ ಕಂಡುಬಂದಿವೆ. ಜೈಪುರ ಗ್ರಾಮೀಣ ಪ್ರದೇಶದ ಮೂಲದ ಈ ಸಹೋದರರು ಕಳೆದ ಐದು-ಆರು ವರ್ಷಗಳಿಂದ ಸಿಕಾರ್ ನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.
ಶಿಕ್ಷಣ ಸಚಿವಾಲಯದ ದೂರಿನ ಮೇರೆಗೆ ಸಿಬಿಐ ಮಂಗಳವಾರ ಸಂಜೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ, ಕಳ್ಳತನ, ಸಾಕ್ಷ್ಯ ನಾಶ, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನ್ಯಾಯ ಮಾರ್ಗ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದೆ.
ಈ ಬೆಳವಣಿಗೆಯ ಬಳಿಕ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಭಜನ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ತನಿಖೆಯಲ್ಲಿ ವಿಳಂಬ ಮಾಡಿದೆ ಎಂದು ಆರೋಪಿಸಿದ್ದು, ರಾಜ್ಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಎಫ್‌ಐಆರ್ ದಾಖಲಿಸದಿರುವುದನ್ನೂ ಟೀಕಿಸಿದ್ದಾರೆ.
ತನಿಖಾ ಮೂಲಗಳ ಪ್ರಕಾರ, ಪ್ರಸ್ತುತ ಪ್ರಕರಣದಲ್ಲಿ ಲಭ್ಯವಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಿವಾಲ್ ಸಹೋದರರ ಚಟುವಟಿಕೆಗಳ ಬಗ್ಗೆ ತನಿಖಾಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.
"ಅವರ ಕುಟುಂಬದ ನಾಲ್ವರು ಸದಸ್ಯರು ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ಹಿನ್ನೆಲೆಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಜಾಲದೊಂದಿಗೆ ಅವರಿಗೆ ಸಂಪರ್ಕ ಇರಬಹುದೇ ಎಂಬ ಶಂಕೆ ತನಿಖಾಧಿಕಾರಿಗಳಲ್ಲಿ ಮೂಡಿದೆ" ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಎಸ್‌ಒಜಿಯ ಪ್ರಾಥಮಿಕ ತನಿಖೆಯ ಪ್ರಕಾರ, ದಿನೇಶ್ ಬಿವಾಲ್, ಗುರುಗ್ರಾಮ್ ಮೂಲದ ವೃತ್ತಿ ಸಲಹೆಗಾರ ಯಶ್ ಯಾದವ್ ನಿಂದ 15 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಖರೀದಿಸಿದ್ದ. ಯಶ್ ಯಾದವ್ ಈ ಪ್ರಶ್ನೆಪತ್ರಿಕೆಯನ್ನು ಪ್ರಕರಣದ ಪ್ರಮುಖ ಆರೋಪಿ ಶುಭಮ್ ಖೈರ್ನರ್ ನಿಂದ ಪಡೆದಿದ್ದ ಎಂದು ಆರೋಪಿಸಲಾಗಿದೆ.
"ದಿನೇಶ್ ಕಳೆದ ವರ್ಷವೂ ಯಶ್ ಯಾದವ್ ನಿಂದ ಪ್ರಶ್ನೆಪತ್ರಿಕೆ ಖರೀದಿಸಿದ್ದನು. ಆ ಸಂದರ್ಭದಲ್ಲಿ ಅವರ ಕುಟುಂಬದ ನಾಲ್ವರು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು" ಎಂದು ಮತ್ತೊಂದು ಮೂಲ ತಿಳಿಸಿದೆ.
ಈ ವರ್ಷ ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ನಾಲ್ಕು ದಿನಗಳ ಮೊದಲು, ಅಂದರೆ ಎಪ್ರಿಲ್ 29ರಂದು ದಿನೇಶ್ ಬಿವಾಲ್ ಪ್ರಶ್ನೆಪತ್ರಿಕೆ ಖರೀದಿಸಿರುವ ಸಾಧ್ಯತೆಯಿದೆ ಎಂದು ತನಿಖೆಯಲ್ಲಿ ಶಂಕಿಸಲಾಗಿದೆ. ಯಶ್ ಯಾದವ್ ಇದೇ ಪ್ರಶ್ನೆಪತ್ರಿಕೆಯನ್ನು ಬಿಹಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳೆಂದು ಶಂಕಿಸಲಾದ ಹಲವರಿಗೆ ಮಾರಾಟ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಪ್ರಶ್ನೆಪತ್ರಿಕೆಯ ಮುದ್ರಿತ ಪ್ರತಿಯನ್ನು ಕೊರಿಯರ್ ಮೂಲಕ ಶುಭಮ್ ಖೈರ್ನರ್ ಗೆ ಕಳುಹಿಸಿದ್ದಾನೆ ಎನ್ನಲಾದ ಧನಂಜಯ್ ಲೋಖಂಡೆ ಎಂಬ ಶಂಕಿತನ ಮೇಲೂ ಸಿಬಿಐ ನಿಗಾ ಇಟ್ಟಿದೆ.
ಮಹಾರಾಷ್ಟ್ರದ ಅಹಲ್ಯಾನಗರ ಮೂಲದ ಲೋಖಂಡೆ ಕಳೆದ ಕೆಲವು ತಿಂಗಳುಗಳಿಂದ ಪುಣೆಯ ವಾಘೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
"ಶುಭಮ್ ಖೈರ್ನರ್ ಗೆ ಪ್ರಶ್ನೆಪತ್ರಿಕೆಯ ಮುದ್ರಿತ ಪ್ರತಿಯನ್ನು ರವಾನಿಸಿದ ವ್ಯಕ್ತಿ ಲೋಖಂಡೆ. ಖೈರ್ನರ್ ಸ್ವೀಕರಿಸಿದ್ದ ಪಾರ್ಸೆಲ್‌ನ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಆತನನ್ನು ಗುರುತಿಸಲಾಗಿದೆ" ಎಂದು ತನಿಖೆಯ ಮಾಹಿತಿ ತಿಳಿದಿರುವ ಮತ್ತೊಂದು ಮೂಲ ಹೇಳಿದೆ.

