ತಿರುವನಂತಪುರ: ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಜಾತ್ಯತೀತ ನಿಲುವಿನಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರತಿಪಾದಿಸಿದ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್, ಕೋಮುವಾದವನ್ನು ಯುಡಿಎಫ್ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಸಚಿವ ಸಂಪುಟ ಸಭೆಯ ಬಳಿಕ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನನ್ನ ಮತ್ತು ಯುಡಿಎಫ್‌ನ ಜಾತ್ಯತೀತ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದರು.
'ಕೋಮುವಾದದ ಧಾಟಿಯಲ್ಲಿ ಯಾರು ಮಾತನಾಡಿದರೂ ತೀವ್ರವಾಗಿ ವಿರೋಧಿಸುತ್ತೇವೆ. ಅದು ಯುಡಿಎಫ್‌ನ ದೃಢ ಜಾತ್ಯತೀತ ನಿಲುವು. ಅದರಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ' ಎಂದು ಪ್ರತಿಕ್ರಿಯಿಸಿದರು.
ಅಧಿಕಾರ ವಹಿಸಿಕೊಳ್ಳುವ ಮೊದಲು ಕ್ರಿಶ್ಚಿಯನ್ 'ಬಿಷಪ್ ಹೌಸ್'ಗಳಿಗೆ ಭೇಟಿ ನೀಡಿದ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
'ಬಿಷಪ್ ಹೌಸ್‌ಗಳಿಗೆ ಹೋಗಿದ್ದರಲ್ಲಿ ತಪ್ಪೇನಿದೆ' ಎಂದು ಪ್ರಶ್ನಿಸಿದ ಅವರು, 'ಅದು ಚುನಾವಣಾ ಗೆಲುವಿನ ನಂತರ ನೀಡಿದ ಭೇಟಿಯೇ ಹೊರತು ಅನುಕೂಲ ಪಡೆಯುವ ಉದ್ದೇಶದ್ದಲ್ಲ' ಎಂದರು. 'ಶಿವಗಿರಿ ಮಠಕ್ಕೂ ಭೇಟಿ ನೀಡಲು ಯೋಜಿಸಿದ್ದೇನೆ' ಎಂದು ಅವರು ಹೇಳಿದರು.
ಸೌಹಾರ್ದ ಸಂಬಂಧ ಬಯಸುವೆ:
'ನನ್ನನ್ನು ಟೀಕಿಸಿದವರೂ ಸೇರಿದಂತೆ ಎಲ್ಲರೊಂದಿಗೂ ಸೌಹಾರ್ದಯುತ ಸಂಬಂಧ ಹೊಂದುವ ಉದ್ದೇಶ ನನ್ನದು. ಎಲ್ಲರನ್ನೂ ಅಪ್ಪಿಕೊಳ್ಳುತ್ತೇನೆ, ವಿರೋಧಿಗಳನ್ನೂ ಭೇಟಿಯಾಗುತ್ತೇನೆ. ಈ ಹುದ್ದೆ ಅಲಂಕರಿಸಿದಾಗ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿರುತ್ತದೆ. ಹೀಗಾಗಿ ಎಲ್ಲರ ಜತೆಗೂ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ಜಾತ್ಯತೀತ ನಿಲುವಿನಲ್ಲಿ ರಾಜಿ ಸಾಧ್ಯವಿಲ್ಲ' ಎಂದರು.
ಪಾಲಕ್ಕಾಡ್‌ನ ಮಾಜಿ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಆರೋಪ ಮಾಡಿದ್ದ ನಟಿ ರಿನಿ ಆನ್ ಜಾರ್ಜ್ ಅವರ ವಿರುದ್ಧ, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಒಂದು ವರ್ಗ ಆಕ್ರೋಶ ವ್ಯಕ್ತಪಡಿಸಿದ್ದು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರು ಎದುರಿಸುತ್ತಿರುವ ಸೈಬರ್ ದಾಳಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಯಾರನ್ನೂ ಅವಮಾನಿಸುವುದು ನಮ್ಮ ನಿಲುವಲ್ಲ. ಯಾವುದೇ ಮಹಿಳೆಯನ್ನು ಅವಮಾನಿಸಬಾರದು. ಸಾಮಾಜಿಕ ಮಾಧ್ಯಮಗಳು, ಮಹಿಳೆಯರು ಅವಮಾನಕ್ಕೆ ಒಳಗಾಗುವ ತಾಣವಾಗಿ ಮಾರ್ಪಟ್ಟಿವೆ' ಎಂದು ಬೇಸರ ವ್ಯಕ್ತಪಡಿಸಿದರು.
'ತಾಯಿ ಹೆಸರು ಹೇಳದ್ದಕ್ಕೆ ಬೇಸರವಿದೆ'
ವಿ.ಡಿ. ಸತೀಶನ್ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ ಮೇಲ್ಜಾತಿಯ ನಾಯರ್ ಸಮುದಾಯ ಬಳಸುತ್ತಿರುವ ಮೆನನ್ ಉಪನಾಮವನ್ನು (ವಡಸೇರಿ ದಾಮೋದರನ್ ಮೆನನ್ ಸತೀಶನ್) ಉದ್ದೇಶಪೂರ್ವಕವಾಗಿ ಬಳಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು 'ನನ್ನ ದಿವಂಗತ ಪೋಷಕರನ್ನು ಸ್ಮರಿಸುವ ಉದ್ದೇಶದಿಂದಲೇ ಪೂರ್ಣ ಹೆಸರನ್ನು ಉಲ್ಲೇಖಿಸಿದ್ದೇನೆ' ಎಂದರು. 'ನನ್ನ ತಂದೆಯ ಹೆಸರನ್ನು ಬಳಸಿದ್ದರಲ್ಲಿ ತಪ್ಪೇನಿದೆ. ನನ್ನ ತಾಯಿಯ ಹೆಸರನ್ನು ಬಳಸಲು ಸಾಧ್ಯವಾಗದಿದ್ದಕ್ಕೆ ಬೇಸರವಿದೆ. ನಾನು ಶಾಸಕನಾಗುವ ಮೊದಲೇ ಇಬ್ಬರೂ ನಿಧನರಾಗಿದ್ದಾರೆ. ತಂದೆಯ ಹೆಸರನ್ನು ಉಲ್ಲೇಖಿಸಲು ಪೂರ್ಣ ಹೆಸರು ಬಳಸಿದ್ದೇನೆ. ತಾಯಿಯ ಹೆಸರನ್ನು ಹೇಳಲು ಯಾವುದೇ ಆಯ್ಕೆ ಇಲ್ಲದ ಕಾರಣ ಅದನ್ನು ಮನಸ್ಸಿನಲ್ಲಿಯೇ ಹೇಳಿಕೊಂಡಿದ್ದೇನೆ' ಎಂದು ಅವರು ಹೇಳಿದರು.
ಖಾತೆ ಹಂಚಿಕೆ: ಸಿ.ಎಂ ಬಳಿ 35 ಇಲಾಖೆ
ತನ್ನೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಸಂಪುಟ ಸಚಿವರಿಗೆ ಮುಖ್ಯಮಂತ್ರಿ ವಿ.ಡಿ.ಸತೀಶನ್ ಖಾತೆಗಳನ್ನು ಹಂಚಿಕೆ ಮಾಡಿದ್ದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಬುಧವಾರ ಅನುಮೋದನೆ ನೀಡಿದ್ದಾರೆ. ಮುಖ್ಯಮಂತ್ರಿ ಸತೀಶನ್ ಅವರು ಹಣಕಾಸು ಕಾನೂನು ಸಾಮಾನ್ಯ ಆಡಳಿತ ಮತ್ತು ಬಂದರು ಸೇರಿದಂತೆ 35 ಇಲಾಖೆಗಳನ್ನು ನಿರ್ವಹಿಸಲಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಖಾತೆ ನೀಡಲಾಗಿದೆ. ಐಯುಎಂಎಲ್ ನಾಯಕ ಕುಂಞಾಲಿಕುಟ್ಟಿ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಮಾಹಿತಿ ತಂತ್ರಜ್ಞಾನ ಗಣಿಗಾರಿಕೆ ಮತ್ತು ಭೂ ವಿಜ್ಞಾನ ಕೈಮಗ್ಗ ಮತ್ತು ಜವಳಿ ಖಾತೆಗಳನ್ನು ವಹಿಸಲಾಗಿದೆ. ಕೇರಳಂ ಪ್ರದೆಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸಣ್ಣಿ ಜೋಸೆಫ್ ಅವರಿಗೆ ವಿದ್ಯುತ್ ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ನೀಡಲಾಗಿದೆ. ಹಿರಿಯ ನಾಯಕ ಕೆ. ಮುರಳೀಧರನ್ ಅವರಿಗೆ ಆರೋಗ್ಯ ದೇವಸ್ವಂ ವೈದ್ಯಕೀಯ ಶಿಕ್ಷಣ ಜವಾಬ್ದಾರಿ ನೀಡಲಾಗಿದೆ. ರೋಜಿ ಎಂ. ಜಾನ್ ಅವರಿಗೆ ಉನ್ನತ ಶಿಕ್ಷಣ ಎ.ಪಿ.ಅನಿಲ್ ಕುಮಾರ್ ಅವರಿಗೆ ಕಂದಾಯ ಎನ್.ಶಂಸುದ್ದೀನ್ ಅವರಿಗೆ ಸಾಮಾನ್ಯ ಶಿಕ್ಷಣ ಖಾತೆ ನೀಡಲಾಗಿದೆ ಎಂದು ಲೋಕಭವನದ ಪ್ರಕಟಣೆ ತಿಳಿಸಿದೆ.

