ಕಾಸರಗೋಡು: ಮೈಸೂರಿನ 'ಸಮತಾ ಅಧ್ಯಯನ ಕೇಂದ್ರ'ವು ಡಾ. ವಿಜಯಾ ದಬ್ಬೆ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ 2026ನೇ ಸಾಲಿನ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ದ್ವಿತೀಯ ಎಂ.ಎ. ವಿದ್ಯಾರ್ಥಿ ದರ್ಶನ್ ಕುಮಾರ್ ಅವರ 'ವ್ಯಾಕರಣಕ್ಕೊಲಿಯದ ಬಯಲು' ಕವನವು ಪ್ರಥಮ, ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ ಜ್ಯೋತಿರ್‍ಲಕ್ಷ್ಮಿ ಅವರ 'ದರ್ಪಣ ಸುಂದರಿ ಮತ್ತು ಕನ್ನಡಿಯ ಕಥೆ' ಕವನವು ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗಿದೆ.
ಸಮತಾ ಅಧ್ಯಯನ ಕೇಂದ್ರವು ಈ ಸ್ಪರ್ಧೆಯನ್ನು 20 ರಿಂದ 35 ವರ್ಷದೊಳಗಿನ ಯುವಜನರಿಗಾಗಿ ಆಯೋಜಿಸಿತ್ತು. ವಿಜೇತರಿಗಾಗಿ ಮೇ 31 ಮತ್ತು ಜೂನ್ 1 ರಂದು ಮೈಸೂರಿನ ಗೋಕುಲಂನಲ್ಲಿರುವ ಇಂಟರ್ ನ್ಯಾಷನಲ್ ಯೂತ್ ಹಾಸ್ಟೆಲ್‍ನಲ್ಲಿ ಎರಡು ದಿವಸಗಳ ಕಾವ್ಯ ಕಮ್ಮಟವನ್ನು ಏರ್ಪಡಿಸಲಾಗಿದೆ. ಜೂನ್ 1ರಂದು ಸಂಜೆ ನಡೆಯುವ
ಸಮಾರಂಭದಲ್ಲಿ ಕನ್ನಡದ ಹಿರಿಯ ಸಾಹಿತಿಗಳ ಉಪಸ್ಥಿತಿಯಲ್ಲಿ ಬಹುಮಾನ ವಿತರಣೆ ನಡೆಯಲಿರುವುದಾಗಿ ಸಂಸ್ಥೆಯ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



