ಚೆನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಎಐಎಡಿಎಂಕೆ ಬುಧವಾರ ಘೋಷಿಸಿದೆ.
ಯಾವುದೇ ಹಂತದಲ್ಲೂ ಪಕ್ಷವು ಈವರೆಗೆ ಟಿವಿಕೆಗೆ ಬೆಂಬಲ ಘೋಷಿಸಿಲ್ಲ ಎಂದೂ ಸ್ಪಷ್ಪಪಡಿಸಿದೆ.
ಸರ್ಕಾರ ರಚಿಸಲು ಎಐಎಡಿಎಂಕೆ ಶಾಸಕರು ಟಿವಿಕೆಗೆ ಬೆಂಬಲ ನೀಡಲಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮುನುಸಾಮಿ, 'ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಸೂಚನೆಯ ಮೇರೆಗೆ ನಾವು ಈ ಸ್ಪಷ್ಟೀಕರಣವನ್ನು ನೀಡುತ್ತೇವೆ. ಇದು ಸಂಪೂರ್ಣ ಸುಳ್ಳು ಸುದ್ದಿ. ಯಾವುದೇ ಹಂತದಲ್ಲೂ ಟಿವಿಕೆಯನ್ನು ಎಐಎಡಿಎಂಕೆ ಬೆಂಬಲಿಸುವುದಿಲ್ಲ' ಎಂದು ಹೇಳಿದ್ದಾರೆ.
ಮೇ 4ರಂದು ನಡೆದ ಫಲಿತಾಂಶ ಘೋಷಣೆಯಾದ ಬಳಿಕ ಹೊಸದಾಗಿ ಆಯ್ಕೆಯಾದ ಶಾಸಕರು ಸೇರಿದಂತೆ ಪಕ್ಷದ ನಾಯಕರು ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಮತ್ತೊಂದೆಡೆ 108 ಸ್ಥಾನ ಗಳಿಸಿದ್ದ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ ಬಹುಮತಕ್ಕೆ ಇನ್ನೂ 10 ಸ್ಥಾನಗಳು ಬೇಕಾಗಿದ್ದು, ಸರ್ಕಾರ ರಚಿಸುವ ನಿಟ್ಟಿನಲ್ಲಿ ಶಾಸಕರ ಬೆಂಬಲ ಗಿಟ್ಟಿಸುವ ಪ್ರಯತ್ನ ಮುಂದುವರಿದಿದೆ. ಬಹುಮತದ ಕೊರತೆಯಿದ್ದರೂ ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದಾರೆ.
234 ಸದಸ್ಯ ಬಲದ ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟಗೊಂಡಿತ್ತು. ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ವಿಸಿಕೆ, ಐಯುಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ಪಕ್ಷಗಳು ತಲಾ 1 ಸ್ಥಾನ ಪಡೆದುಕೊಂಡಿವೆ.

