ಕಾಸರಗೋಡು: ಕಾಞಂಗಾಡು ನರಸಭಾ ವ್ಯಾಪ್ತಿಯಲ್ಲಿನ ತ್ಯಾಜ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ಕಾಞಂಗಾಡ್ ನಗರದ ಪ್ರಮುಖ ಕೇಂದ್ರಗಳಲ್ಲಿ 15ಕ್ಕೂ ಹೆಚ್ಚು ಹೊಸ ತ್ಯಾಜ್ಯ ಸುರಿಯುವ ತೊಟ್ಟಿಗಳನ್ನು ಸ್ಥಾಪಿಸಲಾಯಿತು.
ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ತ್ಯಾಜ್ಯವನ್ನು ವರ್ಗೀಕರಿಸಲು ಮತ್ತು ಸಂಗ್ರಹಿಸಲು ನಗರಸಭೆ ಸೂಕ್ತ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದ್ದು, ಜೈವಿಕ ಮತ್ತು ಅಜೈವಿಕ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಎರಡು ತೊಟ್ಟಿಗಳನ್ನು ಸ್ಥಾಪಿಸಲಾಗಿದೆ. ನೂತನವಾಗಿ ಅಳವಡಿಸಲಾದ ತೊಟ್ಟಿಗಳ ಉದ್ಘಾಟನೆಯನ್ನು ನಗರಸಭಾಧ್ಯಕ್ಷ ವಿ.ವಿ ರಮೇಶನ್ ನೆರವೇರಿಸಿದರು. ಈ ಸಂದರ್ಭ ಮತನಾಡಿದ ಅವರು, ಪರಿಸರ ಸಂರಕ್ಷಣೆಗಾಗಿ ಹಾಗೂ ಪ್ರಕೃತಿಯನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲು ಯಾವಾಗಲೂ ಆದ್ಯತೆ ನೀಡಬೇಕು. ಪರಿಸರ ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸಾಮೂಹಿಕವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಪ್ರತಿಯೊಂದು ಸಂಗ್ರಹಣಾ ಘಟಕವು ಎರಡು ಪ್ರತ್ಯೇಕ ವಿಭಾಗಗಳನ್ನು ಹೊಂದಿದ್ದು, ನಗರದಲ್ಲಿ ಲೋಹದಿಂದ ತಯಾರಿಸಿದ ಇಂತಹ 35 ತ್ಯಾಜ್ಯದ ತೊಟ್ಟಿಗಳನ್ನು ಅಲವಡಿಸಲು ಯೋಜನೆ ತಯಾರಿಸಿದೆ. ಇವುಗಳಲ್ಲಿ 15 ಪೆಟ್ಟಿಗೆಗಳನ್ನು ಮೊದಲ ಹಂತದಲ್ಲಿ ಸ್ಥಾಪಿಸಲಾಗಿದ್ದರೆ, ಉಳಿದವುಗಳನ್ನು ಮುಂದಿನ ದಿನಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗುವುದು ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.



