ಟೆಹರಾನ್: ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮುಂದಿರಿಸಿದ ಪ್ರಸ್ತಾಪಕ್ಕೆ ಇರಾನ್ ತನ್ನ ಪ್ರತಿಕ್ರಿಯೆಯನ್ನು ಪಾಕಿಸ್ತಾನದ ಮೂಲಕ ರವಾನಿಸಿರುವುದಾಗಿ ಇರಾನ್‍ನ ಸರ್ಕಾರಿ ಸ್ವಾಮ್ಯದ `ಇರ್ನಾ' ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ಉದ್ದೇಶಿತ ಯೋಜನೆಯ ಪ್ರಕಾರ, ಮಾತುಕತೆಗಳ ಮೊದಲ ಹಂತವು ಯುದ್ಧವನ್ನು ಕೊನೆಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ.
ಪ್ರತಿಕ್ರಿಯೆ ಕೈ ಸೇರಿರುವುದನ್ನು ಪಾಕಿಸ್ತಾನ ದೃಢಪಡಿಸಿದ್ದು ಇದಕ್ಕೆ ಅಮೆರಿಕದ ಉತ್ತರವನ್ನು ನಿರೀಕ್ಷಿಸುತ್ತಿರುವುದಾಗಿ ಇರಾನ್ ಸರಕಾರದ ಮೂಲಗಳು ಹೇಳಿವೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
ಕಾರ್ಯಾಚರಣೆ ಮುಂದುವರಿಸಲು ಮತ್ತು ವಿರೋಧಿಗಳನ್ನು ದೃಢವಾಗಿ ಎದುರಿಸಲು ಹೊಸ ಮಾರ್ಗದರ್ಶಿ ಕ್ರಮಗಳನ್ನು ಇರಾನ್‍ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಇರಾನ್‍ನ ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ ಸೂಚಿಸಿರುವುದಾಗಿ ವರದಿಯಾಗಿದೆ.
ಇರಾನ್ ವಿರುದ್ಧದ ಅಮೆರಿಕನ್ ನಿರ್ಬಂಧಗಳನ್ನು ಅನುಸರಿಸುವ ದೇಶಗಳು ಹಾರ್ಮುಝ್ ಜಲಸಂಧಿಯನ್ನು ದಾಟಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‍ನ ಸೇನೆ ಎಚ್ಚರಿಸಿದೆ.
ಯಾವುದೇ ಕ್ರಮವನ್ನು ಎದುರಿಸಲು ದೇಶವು ಸಿದ್ಧವಾಗಿದೆ ಎಂದು ಇರಾನ್‍ನ ಸಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ.
ಅಬುಧಾಬಿಯಿಂದ ಬರುತ್ತಿದ್ದ ವಾಣಿಜ್ಯ ಸರಕು ನೌಕೆಯ ಮೇಲೆ ತನ್ನ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಡ್ರೋನ್ ದಾಳಿ ನಡೆದ ಬಳಿಕ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಸಾವು-ನೋವು ವರದಿಯಾಗಿಲ್ಲ ಎಂದು ಖತರ್ ರಕ್ಷಣಾ ಇಲಾಖೆ ರವಿವಾರ ಹೇಳಿದೆ.
ಹಾರ್ಮುಝ್ ಜಲಸಂಧಿಯನ್ನು `ಒತ್ತಡದ ಸಾಧನವಾಗಿ' ಬಳಸುವುದು ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಖತರ್ ಪ್ರಧಾನಿ ಇರಾನ್‍ಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್‍ನ ಆಗ್ನೇಯ ನಗರವಾದ ಚಬಹಾರ್‌ನಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‍ನಿಂದ ಪ್ರಯೋಗಿಸಲಾದ ಎರಡು ಡ್ರೋನ್‍ಗಳನ್ನು ದೇಶದ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಯುಎಇ ರಕ್ಷಣಾ ಇಲಾಖೆ ರವಿವಾರ ಹೇಳಿದೆ.
ಇರಾನ್ ವಿರುದ್ಧದ ನೌಕಾ ದಿಗ್ಬಂಧನವನ್ನು ಅಮೆರಿಕ ಬಿಗಿಗೊಳಿಸಿದ್ದು ಎಪ್ರಿಲ್ 13ರಿಂದ ಅಮೆರಿಕನ್ ಪಡೆಗಳು 58 ವಾಣಿಜ್ಯ ಹಡಗುಗಳಿಗೆ ದಾರಿಯನ್ನು ಬದಲಾಯಿಸಲು ಸೂಚಿಸಿದೆ ಮತ್ತು ನಾಲ್ಕು ಹಡಗುಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ವರದಿಯಾಗಿದೆ.

