HEALTH TIPS

ಮಣಿಪುರ | ಕಾಮ್ಜಾಂಗ್ ಜಿಲ್ಲೆಯ ಗಡಿ ಗ್ರಾಮಗಳ ಮೇಲೆ ಬಂಡುಕೋರರಿಂದ ಸಶಸ್ತ್ರ ದಾಳಿ, ಮನೆಗಳಿಗೆ ಬೆಂಕಿ; ಕಾಡಿನತ್ತ ಪರಾರಿಯಾದ ಗ್ರಾಮಸ್ಥರು

ಇಂಫಾಲ: ಭಾರತ-ಮಯನ್ಮಾರ್ ಗಡಿ ಸಮೀಪದ ಮಣಿಪುರದ ಕಾಮ್ಜಾಂಗ್ ಜಿಲ್ಲೆಯ ತಂಗ್ಖುಲ್ ನಾಗಾ ಗ್ರಾಮಗಳ ಮೇಲೆ ಗುರುವಾರ ಮುಂಜಾನೆ ಭಾರಿ ಶಸ್ತ್ರಸಜ್ಜಿತ ಬಂಡುಕೋರರು ದಾಳಿ ನಡೆಸಿ ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರು ಮನೆಗಳನ್ನು ತೊರೆದು ಕಾಡು ಪ್ರದೇಶಗಳಿಗೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಸೋಮ್ ಖುಲ್ಲೆನ್ ಪೊಲೀಸ್ ಠಾಣೆ ವ್ಯಾಪ್ತಿಯ ನಮ್ಲೀ, ವಾಂಗ್ಲೀ ಹಾಗೂ ಚೋರೋ ಪ್ರದೇಶಗಳ ಗ್ರಾಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದಾಳಿಯ ವೇಳೆ ಭಯಭೀತರಾದ ಸ್ಥಳೀಯರು ಕುಟುಂಬ ಸಮೇತರಾಗಿ ಸಮೀಪದ ಕಾಡುಗಳಲ್ಲಿ ಆಶ್ರಯ ಪಡೆದಿದ್ದಾರೆ.

ದಾಳಿಗೊಳಗಾದ ಗ್ರಾಮಗಳು ಭಾರತ-ಮಯನ್ಮಾರ್ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ ಒಂದು ಕಿಮೀ ದೂರದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಒಬ್ಬ ವೃದ್ಧೆ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಗ್ರಾಮಸ್ಥರ ಪ್ರಕಾರ, ನಮ್ಲೀ ಗ್ರಾಮದಲ್ಲಿನ ಎರಡು ಮನೆಗಳು ಹಾಗೂ ವಾಂಗ್ಲೀಯಲ್ಲಿನ ಮೂರರಿಂದ ನಾಲ್ಕು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಚೋರೋ ಪ್ರದೇಶದಲ್ಲಿಯೂ ಚರ್ಚ್ ಅನ್ನು ಹೊರತುಪಡಿಸಿ ಹಲವಾರು ಮನೆಗಳು ಸುಟ್ಟುಹೋಗಿವೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಅಸ್ಸಾಂ ರೈಫಲ್ಸ್ ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿವೆ.

ಈ ದಾಳಿಯನ್ನು ಮಯನ್ಮಾರ್ ಮೂಲದ ಉಗ್ರ ಸಂಘಟನೆಗಳಾದ ಕುಕಿ ನ್ಯಾಷನಲ್ ಆರ್ಮಿ (ಬರ್ಮಾ) ಹಾಗೂ ಪೀಪಲ್ಸ್ ಡಿಫೆನ್ಸ್ ಫೋರ್ಸ್ ನಡೆಸಿವೆ ಎಂದು ಫುಂಗ್ಯಾರ್ ಶಾಸಕ ಎಲ್. ಕೀಶಿಂಗ್ ಆರೋಪಿಸಿದ್ದಾರೆ.

ಇದೇ ವೇಳೆ, ತಂಗ್ಖುಲ್ ನಾಗಾ ಗಡಿ ಪ್ರದೇಶದ ಗ್ರಾಮಗಳ ಮೇಲೆ ಕುಕಿ ನ್ಯಾಷನಲ್ ಆರ್ಮಿ (ಬರ್ಮಾ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಕಿ ಬಂಡುಕೋರರು ದಾಳಿ ನಡೆಸಿರುವುದನ್ನು ಖಂಡಿಸಿರುವ ದಕ್ಷಿಣ ತಂಗ್ಖುಲ್ ವಿದ್ಯಾರ್ಥಿಗಳ ಸಂಘಟನೆ 'ತಂಗ್ಖುಲ್ ಏಝ್ ಕಟಾಮ್ನೌ ಲಾಂಗ್', ಘಟನೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದೆ.

ಸುಮಾರು 100 ಮಂದಿ ಸಶಸ್ತ್ರ ಕುಕಿ ನ್ಯಾಷನಲ್ ಆರ್ಮಿ (ಬರ್ಮಾ) ಬಂಡುಕೋರರು ಗಡಿಯನ್ನು ದಾಟಿ ಬಂದು ನಮ್ಲೀ, ವಾಂಗ್ಲೀ, ಅಶಾಂಗ್ ಖುಲ್ಲೆನ್ ಹಾಗೂ ಚೋರೋ ಪ್ರದೇಶಗಳ ಗ್ರಾಮಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

ತೊಂದರೆಗೀಡಾದ ಗ್ರಾಮಗಳಲ್ಲಿ ಮಣಿಪುರ ಪೊಲೀಸ್ ಕಮಾಂಡೊಗಳನ್ನು ನಿಯೋಜಿಸಬೇಕು. ಅಲ್ಲದೆ, ಇಷ್ಟು ದೊಡ್ಡ ಸಂಖ್ಯೆಯ ಸಶಸ್ತ್ರ ಬಂಡುಕೋರರು ತಪಾಸಣೆ ಇಲ್ಲದೆ ಅಂತಾರಾಷ್ಟ್ರೀಯ ಗಡಿ ದಾಟಲು ಅವಕಾಶ ದೊರೆತಿರುವ ಭದ್ರತಾ ಲೋಪದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries