ಚೆನ್ನೈ: ಎಂಟು ತಿಂಗಳ ತುಂಬು ಗರ್ಭಿಣಿ ಗೃಹಿಣಿ ಎಂ.ಆರ್. ಪಲ್ಲವಿ ಅವರು ಚೆನ್ನೈನ ತಿರು ವಿ ಕಾ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು, ತಮಿಳುನಾಡು ಚುನಾವಣಾ ರಾಜಕೀಯದಲ್ಲಿ ವಿಶೇಷ ಗಮನ ಸೆಳೆದಿದ್ದಾರೆ.
ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿಯಾಗಿದ್ದ ಅವರು, ಡಿಎಂಕೆ ಅಭ್ಯರ್ಥಿ ಕೆ.ಎಸ್.ರವಿಚಂದ್ರನ್ ಅವರನ್ನು 22,333 ಮತಗಳ ಅಂತರದಿಂದ ಸೋಲಿಸಿದ್ದಾರೆ.36 ವರ್ಷದ ಪಲ್ಲವಿ ಅವರು 12ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದು, ಗೃಹಿಣಿಯಾಗಿದ್ದಾರೆ. ಮೀಸಲು ಕ್ಷೇತ್ರವಾದ ತಿರು ವಿ ಕಾ ನಗರದಲ್ಲಿ ಅವರು ಗರ್ಭಿಣಿಯಾಗಿದ್ದರೂ ಮನೆ ಮನೆಗೆ ತೆರಳಿ ವ್ಯಾಪಕ ಪ್ರಚಾರ ನಡೆಸಿದ್ದರು. ಮತದಾರರನ್ನು ನೇರವಾಗಿ ಭೇಟಿ ಮಾಡಿ ಬೆಂಬಲ ಕೋರಿದ್ದ ಅವರು, ಪ್ರಚಾರದ ಅವಧಿಯಲ್ಲಿ ಸ್ಥಳೀಯರ ಗಮನ ಸೆಳೆದಿದ್ದರು.
ಸ್ಥಳೀಯ ಮೂಲಗಳ ಪ್ರಕಾರ, ಚುನಾವಣಾ ಪ್ರಚಾರದ ವೇಳೆ ಒಮ್ಮೆ ಅವರು ಮೂರ್ಛೆ ಹೋಗಿದ್ದರೂ ಬಳಿಕ ಮತ್ತೆ ಪ್ರಚಾರ ಮುಂದುವರಿಸಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ವೈದ್ಯರ ಸಲಹೆಯಂತೆ ಅವರು ವಿಶ್ರಾಂತಿಯಲ್ಲಿ ಇದ್ದು, ಮಾಧ್ಯಮಗಳೊಂದಿಗೆ ಮಾತನಾಡಿಲ್ಲ. ಅವರ ಪತಿ ರಾಜೇಶ್ ಮಾತ್ರ ಪ್ರಚಾರದ ಅನುಭವಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ತಿರು ವಿ ಕಾ ನಗರದ ಕಿರಿದಾದ ಬೀದಿಗಳಲ್ಲಿರುವ ಪಲ್ಲವಿ ನಿವಾಸಕ್ಕೆ ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳ ದಂಡೇ ಹರಿದು ಬರುತ್ತಿದೆ. ಸಾಮಾನ್ಯ ಹಿನ್ನೆಲೆಯ ಮಹಿಳೆಯೊಬ್ಬರು ಚುನಾವಣೆಯಲ್ಲಿ ಜಯ ಸಾಧಿಸಿರುವುದು 2013ರಲ್ಲಿ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಉದಯದ ಸಂದರ್ಭವನ್ನು ನೆನಪಿಸುವಂತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ನಟ-ರಾಜಕಾರಣಿ ವಿಜಯ್ ಅವರ ಅಭಿಮಾನಿಯಾಗಿದ್ದ ಪಲ್ಲವಿ, ಟಿವಿಕೆ ಪಕ್ಷ ಸ್ಥಾಪನೆಯಾದ ತಕ್ಷಣ ಅದಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಅವರು ಪಕ್ಷದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಲ್ಲಿ ಒಬ್ಬರಾಗಿದ್ದಾರೆ.
ತಮಿಳಗ ವೆಟ್ರಿ ಕಳಗಂ ಈ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59 ಮತ್ತು ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿವೆ.
ಪಲ್ಲವಿ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಮೇ 20ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದಾರೆ. ಅದಕ್ಕೂ ಮುನ್ನ ತಿರು ವಿ ಕಾ ನಗರದ ಮತದಾರರು ಅವರನ್ನು ರಾಜ್ಯ ವಿಧಾನಸಭೆಯಲ್ಲಿ ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿಮಾಡಿದೆ.

