ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಗಳಿಸಿದ ಬಳಿಕ ಬಿಜೆಪಿ ನೇತೃತ್ವದ ನೂತನ ಸರ್ಕಾರ ರಚನೆಗೆ ಇದು ದಾರಿ ಸುಗಮ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 102 ಸ್ಥಾನಗಳನ್ನು ಗಳಿಸಿದೆ. ಇದರೊಂದಿಗೆ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ರಾಜ್ಯಪಾಲರು ಹಿಮಾಂತ ಬಿಸ್ವಾ ಶರ್ಮಾ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ನೂತನ ಸರ್ಕಾರ ಅಧಿಕಾರ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲರು ಶರ್ಮಾ ಅವರಲ್ಲಿ ವಿನಂತಿಸಿದ್ದಾರೆ.
ಲೋಕಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ 11ರ ಬಳಿಕ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
''ಇದು ಚಾರಿತ್ರಿಕ ಗೆಲುವಾಗಿರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಂತಿಸಲಾಗಿದೆ'' ಎಂದು ಅವರು ತಿಳಿಸಿದ್ದಾರೆ.
ಮೇ 11ರ ವರೆಗೆ ಮೋದಿ ಅವರು ಬ್ಯುಸಿಯಾಗಿದ್ದಾರೆ ಎಂದು ಪ್ರಧಾನ ಮಂತ್ರಿಯವರ ಕಚೇರಿ ತಿಳಿಸಿದೆ. ಈ ದಿನಾಂಕದ ನಂತರ ಅವರಿಗೆ ರಾಜ್ಯಕ್ಕೆ ಭೇಟಿ ನೀಡಲು ಸಾಧ್ಯವಾಗಬಹುದು ಎಂದು ಶರ್ಮಾ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪ್ರಶ್ನಿಸಿದಾಗ ಶರ್ಮಾ ಅವರು, ಬಿಜೆಪಿ ಇಬ್ಬರು ಕೇಂದ್ರ ವೀಕ್ಷಕರನ್ನು ನಿಯೋಜಿಸಿದೆ. ಅವರ ಉಪಸ್ಥಿತಿಯಲ್ಲಿ ಶಾಸಕಾಂಗ ಪಕ್ಷ ಮುಂದಿನ ಮುಖ್ಯಮಂತ್ರಿಯಾಗುವ ನಾಯಕನನ್ನು ಆಯ್ಕೆ ಮಾಡಲಿದೆ. ಅನಂತರ ಎನ್‌ಡಿಎಯ ಘಟಕ ಪಕ್ಷಗಳು ಚರ್ಚಿಸಿ ಈ ಹೆಸರನ್ನು ಅಂತಿಮಗೊಳಿಸಲಿವೆ. ಆದುದರಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಾವು ಕಾಯಬೇಕು ಎಂದಿದ್ದಾರೆ.

