ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯ ಸಂದೇಶ್ ಖಾಲಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಚುನಾವಣೋತ್ತರ ಹಿಂಸಾಚಾರ ನಡೆದಿದೆ. ಹಿಂಸಾಚಾರದ ವೇಳೆ, ನಝತ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸೇರಿದಂತೆ ನಾಲ್ವರು ಪೊಲೀಸರು ಮತ್ತು ಇಬ್ಬರು ಯೋಧರ ಮೇಲೆ ಗುಂಡು ಹಾರಿಸಲಾಗಿದೆ.
ಅದೇ ವೇಳೆ, ಹಿಂಸಾಚಾರ ಮತ್ತು ದಾಂಧಲೆಯಲ್ಲಿ ಶಾಮೀಲಾದವರನ್ನು ಕೂಡಲೇ ಬಂಧಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯಾದ್ಯಂತ ಹಿಂಸಾಚಾರ ಆರಂಭಗೊಂಡಿದ್ದು, ಅವ್ಯಾಹತವಾಗಿ ಮುಂದುವರಿದಿದೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯು 207 ಸ್ಥಾನಗಳನ್ನು ಗಳಿಸಿದ್ದು, ಭಾರೀ ಬಹುಮತದೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದಲ್ಲಿ ಮಂಗಳವಾರ ಇಬ್ಬರು ಮೃತಪಟ್ಟಿದ್ದಾರೆ. ಅದಲ್ಲದೆ, ಕೋಲ್ಕತಾ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷಗಳ ಕಚೇರಿಗಳನ್ನು ಧ್ವಂಸಗೈಯಲಾಗುತ್ತಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ಗಸ್ತು ಏರ್ಪಡಿಸುವಂತೆ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ, ಕೋಲ್ಕತಾ ಪೊಲೀಸ್ ಕಮಿಷನರ್ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮಹಾ ನಿರ್ದೇಶಕರಿಗೆ ಮುಖ್ಯ ಚುನಾವಣಾ ಆಯುಕ್ತ ಸೂಚನೆ ನೀಡಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
''ಹಿಂಸೆಯನ್ನು ಉತ್ತೇಜಿಸುವವರನ್ನು ಮತ್ತು ದಾಂಧಲೆ ನಡೆಸುತ್ತಿರುವವರನ್ನು ತಕ್ಷಣ ಬಂಧಿಸಬೇಕು'' ಎಂದು ಜ್ಞಾನೇಶ್ ಕುಮಾರ್ ತಮ್ಮ ಸೂಚನೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ರಾತ್ರಿ ನಝತ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್‌ಬರಿ ಪ್ರದೇಶದಲ್ಲಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ವೇಳೆ, ಠಾಣಾ ಉಸ್ತುವಾರಿ ಭರತ್ ಪ್ರಸೂನ್ ಪುರಕಾಯಸ್ಥ ಮತ್ತು ಒಬ್ಬ ಮಹಿಳಾ ಕಾನ್‌ಸ್ಟೇಬಲ್ ಸೇರಿ ರಾಜ್ಯದ ನಾಲ್ವರು ಪೊಲೀಸ್ ಸಿಬ್ಬಂದಿ ಹಾಗೂ ಇಬ್ಬರು ಸಿಎಪಿಎಫ್ ಯೋಧರು ಗುಂಡಿನ ಗಾಯಕ್ಕೊಳಗಾದರು. ಪೊಲೀಸ್ ಸಿಬ್ಬಂದಿ ಮತ್ತು ಸಿಎಪಿಎಫ್ ಯೋಧರು ಸ್ಥಳಕ್ಕೆ ಧಾವಿಸುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿತು ಎನ್ನಲಾಗಿದೆ.

