ನವದೆಹಲಿ: ದೇಶದಾದ್ಯಂತ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ₹3 ಹಾಗೂ ಸಿಎನ್‌ಜಿ ದರದಲ್ಲಿ ₹2 ಏರಿಕೆಯಾಗಿದ್ದು, ಜನಸಾಮಾನ್ಯರ ಆರ್ಥಿಕ ಸ್ಥಿತಿಯ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ. ಕೇವಲ ವಾಹನ ಸವಾರರಿಗಷ್ಟೇ ಅಲ್ಲದೆ, ಸರಕು ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುವ ಭೀತಿ ಎದುರಾಗಿದೆ.
ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಈ ಕ್ರಮವು ಕೃಷಿ, ಪ್ರವಾಸೋದ್ಯಮ ಮತ್ತು ಸಾರಿಗೆ ಸೇರಿದಂತೆ ಎಲ್ಲಾ ಪ್ರಮುಖ ವಲಯಗಳ ಮೇಲೆ ನೇರ ಪ್ರಭಾವ ಬೀರಲಿದೆ.
ಆಹಾರ, ಅಗತ್ಯ ವಸ್ತುಗಳ ಬೆಲೆ ಏರಿಕೆ
ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಯೂ ಏರಿಕೆಯಾಗಿರುವ ಕಾರಣ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದೆ. ಇದರ ನೇರ ಪರಿಣಾಮ ತರಕಾರಿ, ಹಣ್ಣು, ಹಾಲಿನ ಉತ್ಪನ್ನಗಳ ಮೇಲೆ ಬೀರಲಿದ್ದು, ಇವುಗಳ ಬೆಲೆ ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆಯಿದೆ.
ಪ್ರವಾಸೋದ್ಯಮ, ವಾಯುಯಾನ
ವಿಮಾನ ಇಂಧನ ಬೆಲೆ ಏರಿಕೆಯಿಂದಾಗಿ ವಿಮಾನಯಾನ ಈಗಾಗಲೇ ಸಂಕಷ್ಟದಲ್ಲಿ ಸಿಲುಕಿದೆ. ಇದಕ್ಕೆ ಸಮನಾಗಿ ಜನರ ಪ್ರಯಾಣ ವೆಚ್ಚ ದುಪ್ಪಟ್ಟಾಗಲಿದ್ದು, ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳಲಿದೆ.
ಒಲಾ, ಉಬರ್, ರ್‍ಯಾಪಿಡೋಗಳ ದರ, ಅಷ್ಟೇ ಯಾಕೆ ಕ್ವಿಕ್ ಕಾಮರ್ಸ್‌ಗಳೂ ತಮ್ಮ ಉತ್ಪನ್ನಗಳ, ಡೆಲಿವರಿ ಚಾರ್ಜ್‌ಗಳನ್ನು ಏರಿಕೆ ಮಾಡಲಿವೆ.
ಕೃಷಿ ವಲಯಕ್ಕೂ ಪೆಟ್ಟು
ಇನ್ನೇನು ಮುಂಗಾರು ಆರಂಭವಾಗಲಿದೆ. ಬಿತ್ತನೆ, ಕಟಾವು ಕಾರ್ಯಕ್ಕಾಗಿ ಹೆಚ್ಚಿನ ರೈತರು ಈಗ ಯಂತ್ರಗಳನ್ನೇ ನಂಬಿಕೊಂಡಿದ್ದಾರೆ. ಈಗ ಇಂಧನಗಳ ಬೆಲೆ ಏರಿಕೆಯಾಗಿರುವುದು ರೈತರ ಕೆಲಸದ ಮೇಲೂ ದೊಡ್ಡ ಹೊಡೆತ ನೀಡಲಿದೆ.
ರಾಸಯನಿಕ ಗೊಬ್ಬರ, ಯಂತ್ರಗಳ ಬಿಡಿ ಭಾಗಗಳ ಸಾಗಣೆ ವೆಚ್ಚವೂ ಏರುವುದರಿಂದ ಉತ್ಪನ್ನಗಳ ಬೆಲೆಯೂ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.
ಬೆಲೆ ಏರಿಕೆಯಾಗಿರುವುದೇಕೆ?
ಯುದ್ಧದ ಕಾರಣದಿಂದ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ತೈಲ ಕಂಪನಿಗಳು ನಿತ್ಯ ₹1 ಸಾವಿರ ಕೋಟಿಯಷ್ಟು ನಷ್ಟ ಅನುಭವಿಸುತ್ತಿವೆ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಈ ಹಿಂದೆಯೇ ಹೇಳಿದ್ದರು.
ಜಾಗತಿಕ ಇಂಧನಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವುದರಿಂದ ದೇಶದಾದ್ಯಂತ ಇಂಧನ ಬೆಲೆ ಪರಿಷ್ಕರಣೆ ಮಾಡಲಾಗಿದೆ ಎಂದು ಕೇಂದ್ರ ಹೇಳಿದೆ.

