ವಾಷಿಂಗ್ಟನ್: ಅಮೆರಿಕದ ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು ಇರಾನ್ ಸೇನೆಯ ವಿಮಾನಗಳನ್ನು ತನ್ನ ವಾಯುನೆಲೆಗಳಲ್ಲಿ ನಿಲ್ಲಿಸಲು ಪಾಕಿಸ್ತಾನವು ಅವಕಾಶ ಮಾಡಿಕೊಟ್ಟಿದೆ ಎಂದು ಅಮೆರಿಕದ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಪಶ್ಚಿಮ ಏಷ್ಯಾದ ಸಂಘರ್ಷವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಅಮೆರಿಕ-ಇರಾನ್ ನಡುವೆ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿಕೊಂಡಿತ್ತು.
ಅಮೆರಿಕ ದಾಳಿಯಿಂದ ತಪ್ಪಿಸಿಕೊಳ್ಳಲು ಇರಾನ್ ತನ್ನ ನಾಗರಿಕ ವಿಮಾನಗಳನ್ನು ಅಘ್ಗಾನಿಸ್ತಾನದಲ್ಲಿ ನಿಲ್ಲಿಸಿತ್ತು ಎಂದು ವರದಿಯಲ್ಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ನಲ್ಲಿ ಕದನ ವಿರಾಮ ಘೋಷಿಸಿದ ಕೂಡಲೇ ಇರಾನ್ ತನ್ನ ಗುಪ್ತಚರ ವಿಮಾನ ಸೇರಿದಂತೆ ವಿವಿಧ ವಿಮಾನಗಳನ್ನು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಕಳುಹಿಸಿತ್ತು ಎಂದು ಅಮೆರಿಕದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸಿಬಿಎಸ್ ವರದಿ ಮಾಡಿದೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು, 'ನೂರ್ ಖಾನ್ ವಾಯುನೆಲೆಯು ನಗರದ ಮಧ್ಯಭಾಗದಲ್ಲಿದೆ. ಸಾರ್ವಜನಿಕರಿಗೆ ತಿಳಿಯದಂತೆ ಅಲ್ಲಿ ದೊಡ್ಡ ಸಮೂಹದ ವಿಮಾನಗಳನ್ನು ನಿಲ್ಲಿಸಲು ಸಾಧ್ಯವಿಲ್ಲ'ಎಂದು ಸಿಬಿಎಸ್ ನ್ಯೂಸ್ಗೆ ತಿಳಿಸಿದ್ದಾರೆ.
ಅಮೆರಿಕದೊಂದಿಗಿನ ಯುದ್ಧ ಆರಂಭಕ್ಕೂ ಮುನ್ನವೇ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇರಾನ್ನ ನಾಗರಿಕ ವಿಮಾನಗಳನ್ನು ನಿಲ್ಲಿಸಲಾಗಿತ್ತು. ಯುದ್ಧ ಆರಂಭವಾದ ನಂತರ ಇರಾನ್ನ ವಾಯುಗಡಿ ಮುಚ್ಚಿರುವುದರಿಂದ ವಿಮಾನಗಳು ಇಲ್ಲೇ ಇದ್ದವು ಎಂದು ಅಘ್ಗಾನಿಸ್ತಾನದ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಘ್ಗಾನಿಸ್ತಾನದ ಮೇಲೆ ಪಾಕಿಸ್ತಾನವು ದಾಳಿ ನಡೆಸಿದ ವೇಳೆ, ಆ ವಿಮಾನಗಳನ್ನು ಇರಾನ್ನ ಗಡಿ ಹತ್ತಿರವಿರುವ ಹೆರಾತ್ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಹೇಳಿದ್ದಾರೆ.
ಈ ವರದಿಗೆ ಪ್ರತಿಕ್ರಿಯಿಸಿರುವ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ, ಅಮೆರಿಕ-ಇರಾನ್ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನವು ಮಧ್ಯವರ್ತಿಯಾಗಿದೆ. ಈ ವರದಿಯು ನಿಜವಾಗಿದ್ದರೆ, ಈ ಸಂಘರ್ಷದಲ್ಲಿ ಪಾಕಿಸ್ತಾನದ ಪಾತ್ರವನ್ನು ಸಂಪೂರ್ಣವಾಗಿ ಮರು ಮೌಲ್ಯಮಾಪನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

