ಪಾಲಕ್ಕಾಡ್: ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆ ಹಲವಾರು ಕಾರಣಗಳಿಗಾಗಿ ಗಮನ ಸೆಳೆದಿದೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಒಂದೇ ಮನೆಯ ಇಬ್ಬರು ಜನಪ್ರತಿನಿಧಿಗಳು ಒಂದೇ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ದೀರ್ಘಕಾಲದಿಂದ ಸಿಪಿಐ(ಎಂ) ಭದ್ರಕೋಟೆಯಾಗಿದ್ದ ಕೊಂಙಡ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ಎ.ತುಳಸಿ ಗೆಲುವು ಸಾಧಿಸಿದಾಗ ಈ ಫಲಿತಾಂಶವು ರಾಜಕೀಯ ವಿಶಿಷ್ಟತೆಗೆ ಕಾರಣವಾಯಿತು.
ತುಳಸಿ ಅವರ ಪತಿ ಕಾಂಗ್ರೆಸ್ ಸಂಸದ ವಿ.ಕೆ. ಶ್ರೀಕಂಠನ್, ಕೊಂಙಡ್ ಒಳಗೊಂಡ ಪಾಲಕ್ಕಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಹಾಲಿ ಶಾಸಕಿ ಕೆ.ಶಾಂತಕುಮಾರಿ ಅವರನ್ನು ತುಳಸಿ 3,706 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆ ಮೂಲಕ ಪತಿಯೊಂದಿಗೆ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
'ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಸಂಘಟಿತ ಪ್ರಚಾರವು ನೆರವಾಯಿತು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು' ಎಂದು ಗೆಲುವಿನ ಬಳಿಕ ತುಳಸಿ ಪ್ರತಿಕ್ರಿಯಿಸಿದ್ದಾರೆ.
ಪತ್ನಿ ಗೆಲುವಿನಲ್ಲಿ ಪತಿ ಶ್ರೀಕಂಠನ್ ಸಹ ಪರಿಶ್ರಮ ವಹಿಸಿದ್ದಾರೆ. ಪಾಲಕ್ಕಾಡ್ ಡಿಸಿಸಿ ಅಧ್ಯಕ್ಷರಾಗಿಯೂ ಸೇರಿದಂತೆ ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅವರಿಗೆ ಚುನಾವಣೆಯ ವಾಸ್ತವಾಂಶ ಹಾಗೂ ಒತ್ತಡದ ಬಗ್ಗೆ ಸ್ಪಷ್ಟ ಅರಿವಿತ್ತು.
ಕೊಂಙಡ್ ಪಾಲಕ್ಕಾಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೆ ಸಂಸದರ ಮನೆಯೀಗ ಶಾಸಕಿಯದ್ದೂ ಆಗಿದೆ. ಅಲ್ಲದೆ ಕೊಂಙಡ್ ಮತದಾರರಿಗೆ ಶಾಸಕರನ್ನು ಭೇಟಿ ಮಾಡುವುದೆಂದರೆ ಸಂಸದರನ್ನೂ ಭೇಟಿ ಮಾಡಲು ಅವಕಾಶ ಸಿಕ್ಕಂತಾಗಿದೆ.
ಈ ಕುರಿತು ಕೇಳಿದಾಗ 'ಖಂಡಿತ' ಎಂದು ತುಳಸಿ ಉತ್ತರಿಸುತ್ತಾರೆ. ಆದರೆ 'ಶಾಸಕಿಯಾಗಿ ತುಳಸಿ ಸ್ವತಂತ್ರವಾಗಿ ಗುರುತಿಸಿಕೊಳ್ಳಬೇಕು' ಎಂದು ಶ್ರೀಕಂಠನ್ ಬಯಸಿದ್ದಾರೆ.
ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಈಡೇರಿಸುವುದಾಗಿ ತುಳಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

