ನವದೆಹಲಿ (PTI): 'ಪಶ್ಚಿಮ ಏಷ್ಯಾ ವಲಯದಲ್ಲಿ ಶಾಂತಿ ಮರುಸ್ಥಾಪಿಸುವಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸಬಹುದು' ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪಶ್ಚಿಮ ಏಷ್ಯಾ ಸಂಘರ್ಷವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗವಿಲ್ಲ.
ಇರಾನ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೂ ಮಿಲಿಟರಿ ಪರಿಹಾರವಲ್ಲ' ಎಂದರು.
'ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳುವ ಯಾವುದೇ ರಚನಾತ್ಮಕ ಕ್ರಮವನ್ನೂ ಇರಾನ್ ಸ್ವಾಗತಿಸುತ್ತದೆ. ಈಗಾಗಲೇ ಅಮೆರಿಕದ ಜತೆಗೆ ಒಂದು ಸುತ್ತಿನ ಮಾತುಕತೆ ಮುಗಿದಿದೆ. ಆದರೆ, ಆ ಮಾತುಕತೆ ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿತ್ತು' ಎಂದು ಅರಾಘ್ಚಿ ಹೇಳಿದರು.
'ಹೊರ್ಮುಜ್ ಜಲಸಂಧಿ ಸಮಸ್ಯೆ ಈಗ ಇನ್ನಷ್ಟು ಜಟಿಲವಾಗಿದೆ. ಆದರೆ, ಈ ಮಾರ್ಗವನ್ನು ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಲು ಇರಾನ್ ಸಿದ್ಧವಿದೆ' ಎಂದರು.
'ಅಮೆರಿಕನ್ನರಿಗೆ ಇರಾನ್ ಅನ್ನು ನಂಬಲು ಹಲವು ಕಾರಣಗಳಿವೆ. ಆದರೆ, ಇರಾನ್‌ಗೆ ಅಮೆರಿಕವನ್ನು ನಂಬದಿರಲು ಅನೇಕ ಕಾರಣಗಳಿವೆ' ಎಂದ ಅರಾಘ್ಚಿ, 'ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನಗಳು ಇನ್ನೂ ವಿಫಲಗೊಂಡಿಲ್ಲ. ಇರಾನ್ ಅಣ್ವಸ್ತ್ರ ಹೊಂದಲು ಬಯಸುತ್ತಿಲ್ಲ' ಎಂದು ಸ್ಪಷ್ಟಪಡಿಸಿದರು.
ಅರಾಘ್ಚಿ- ಜೈಶಂಕರ್ ಮಾತುಕತೆ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಚ್ಚಾತೈಲ ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ಮತ್ತು ಸಾಗರ ಸ್ಥಿರತೆ ಕುರಿತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶುಕ್ರವಾರ ಇಲ್ಲಿ ಮಾತುಕತೆ ನಡೆಸಿದರು.
ಅರಾಘ್ಚಿ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದಾರೆ.
'ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಕುರಿತು ಮತ್ತು ದ್ವಿಪಕ್ಷೀಯ ಸಹಕಾರದ ಬಗ್ಗೆ ಅರಾಘ್ಚಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ' ಎಂದು ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

