ಕೋಲ್ಕತ್ತ: ಬಿಜೆಪಿ ಶಾಸಕ ರತೀಂದ್ರ ಬೋಸ್ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯದ ಉತ್ತರ ಭಾಗದಿಂದ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಬಿಜೆಪಿ ಶಾಸಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸದನದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಬೋಸ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಹಂಗಾಮಿ ಸಭಾಪತಿ ತಪಸ್ ರಾಯ್ ಅವರು ಧ್ವನಿ ಮತದಾನ ನಡೆಸಿದರು. ಬೋಸ್ ಪರ 207 ಬಿಜೆಪಿ ಶಾಸಕರು ಬೆಂಬಲ ವ್ಯಕ್ತಪಡಿಸಿದರು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಬೋಸ್ ಅವರು ಸಭಾಪತಿ ಆಗಿ ಆಯ್ಕೆಯಾಗಿದ್ದಾರೆ ಎಂದು ರಾಯ್ ಘೋಷಿಸಿದರು.
ಈಚೆಗೆ ನಡೆದ 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ವಿರೋಧ ಪಕ್ಷ ಟಿಎಂಸಿ ಸಭಾಪತಿ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದರಿಂದ ಬೋಸ್ ಅವರ ಹಾದಿ ಸುಗಮವಾಯಿತು.
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರತೀಂದ್ರ ಬೋಸ್ ಅವರು ಆರ್ಎಸ್ಎಸ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ಈವರೆಗೆ ವಕೀಲರು ಅಥವಾ ಕಾನೂನು ಹಿನ್ನೆಲೆಯುಳ್ಳವರನ್ನು ಸಭಾಪತಿ ಹುದ್ದೆಗೆ ಆಯ್ಕೆ ಮಾಡುವ ಸಂಪ್ರದಾಯ ರಾಜ್ಯದಲ್ಲಿತ್ತು. ಬೋಸ್ ಆಯ್ಕೆಯು ಈ ಸಂಪ್ರದಾಯಕ್ಕಿಂತ ಭಿನ್ನವಾಗಿದೆ.
ಬೋಸ್ ಅವರು ಸಭಾಪತಿಯಾಗಿ ಆಯ್ಕೆಯಾದ ನಂತರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸದನವನ್ನು ಉದ್ದೇಶಿಸಿ ಮಾತನಾಡಿದರು. ವಿರೋಧ ಪಕ್ಷದ ನಾಯಕ ಶೋಭನ್ದೇಬ್ ಚಟ್ಟೋಪಾಧ್ಯಾಯ ಅವರೂ ನೂತನ ಸಭಾಪತಿಯನ್ನು ಸ್ವಾಗತಿಸಿದರು.
ಈ ಹಿಂದಿನ ಟಿಎಂಸಿ ಆಡಳಿತ ಸರ್ಕಾರದಲ್ಲಿ ಬಿಮನ್ ಬ್ಯಾನರ್ಜಿ ಅವರು ಸಭಾಪತಿಯಾಗಿದ್ದರು.

