ಚೆನ್ನೈ: ಚೆನ್ನೈನ ಶೋಲಿಂಗನಲ್ಲೂರ್ ಪ್ರದೇಶದಲ್ಲಿರುವ ಟೆಕ್ ಮಹೀಂದ್ರಾ ಕಂಪನಿಯ ಕ್ಯಾಂಪಸ್‌ನಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಚೇರಿಯಲ್ಲಿದ್ದ ನೌಕರರನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.
ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಟೆಕ್ ಮಹೀಂದ್ರಾ ವಕ್ತಾರರು, 'ನಮ್ಮ ಚೆನ್ನೈ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ನಿಜ. ಸ್ಥಳೀಯ ಅಧಿಕಾರಿಗಳು ಮತ್ತು ತುರ್ತು ಸೇವಾ ತಂಡಗಳ ಸಹಕಾರದೊಂದಿಗೆ ಬೆಂಕಿಯನ್ನು ಕೂಡಲೇ ನಿಯಂತ್ರಿಸಲಾಗಿದೆ. ನೌಕರರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಸದ್ಯ ಘಟನಾ ಸ್ಥಳದ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ನೌಕರರಿಗೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ.

