ನವದೆಹಲಿ: ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲೂ ಜಾಮೀನು ಕಟ್ಟಳೆಯಾಗಬೇಕು, ಜೈಲು ವಿನಾಯಿತಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
2020ರ ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜಿಲ್ ಇಮಾಮ್‌ಗೆ ಜಾಮೀನು ನಕಾರ
2020ರ ದೆಹಲಿ ಗಲಭೆ ಸಂಬಂಧ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ ತನ್ನ ಮತ್ತೊಂದು ಪೀಠದ ಹಿಂದಿನ ತೀರ್ಪಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಾದಕವಸ್ತು ಭಯೋತ್ಪಾದನೆ ಸಂಬಂಧ 2020ರ ಜೂನ್‌ನಿಂದ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ನಿವಾಸಿ ಸೈಯದ್ ಇಫ್ತಿಕಾರ್ ಅಂದ್ರಾಬಿ ವಿರುದ್ಧ ಎನ್‌ಐಎ ದಾಖಲಿಸಿಕೊಂಡ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಉಜ್ಜಲ್ ಭುಯನ್ ಅವರಿದ್ದ ಪೀಠ ತನ್ನ ತೀರ್ಪಿನಲ್ಲಿ ಕಾನೂನು ತತ್ವಗಳನ್ನು ಉಲ್ಲೇಖಿಸಿದೆ.
ಯುಎಪಿಎಯಡಿ ಪ್ರಕರಣ ದಾಖಲಾಗಿದ್ದರೂ, ಜಾಮೀನು ಕಟ್ಟಳೆಯಾಗಬೇಕು. ಉಗ್ರವಾದ ವಿರೋಧಿ ಕಠಿಣ ಕಾನೂನಿನಡಿ ಪ್ರಕರಣ ದಾಖಲಾಗಿದೆ ಎಂದ ಮಾತ್ರಕ್ಕೆ ವಿಚಾರಣೆಯನ್ನು ನಿಧಾನಗೊಳಿಸಲಾಗದು ಎಂದೂ ಪೀಠ ಇದೇ ವೇಳೆ ಹೇಳಿದೆ.
ದೆಹಲಿ ಹಲಭೆಗೆ ಸಂಬಂಧಿಸಿದ 'ಗುಲ್‌ಫಿಶಾ ಫಾತಿಮಾ vs ಕೇಂದ್ರ ಸರ್ಕಾರ' ಪ್ರಕರಣದಲ್ಲಿ ನೀಡಿದ ತೀರ್ಪಿನ ಬಗ್ಗೆಯೂ ಕೋರ್ಟ್ ಇದೇ ವೇಳೆ ಶಂಕೆ ವ್ಯಕ್ತಪಡಿಸಿದೆ. ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಲಾಗಿದ್ದರೂ, ಬೇರೊಂದು ಪೀಠವು 2026 ಜನವರಿ 5 ರಂದು ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್‌ಗೆ ಜಾಮೀನು ನಿರಾಕರಿಸಿತ್ತು. ಪುನರ್‌ಪರಿಶೀಲನಾ ಅರ್ಜಿ ಕೂಡ 2026ರ ಏಪ್ರಿಲ್ 16ರಂದು ತಿರಸ್ಕೃತಗೊಂಡಿತ್ತು.
ಈಗಿನ ಪ್ರಕರಣದಲ್ಲಿ (ಇಫ್ತಿಕಾರ್) ತೀರ್ಪು ಪ್ರಕಟಿಸುವ ವೇಳೆ, ಗುಲ್‌ಫಿಶಾ ಫಾತಿಮಾ ಪ್ರಕರಣದ ತೀರ್ಪಿನ ಬಗ್ಗೆ ಪೀಠಕ್ಕೆ ಗಂಭೀರ ಆಕ್ಷೇಪಣೆಗಳಿವೆ ಎಂದು ಹೇಳಿದೆ.

