ನವದೆಹಲಿ: ಹರಿಯಾಣದ ಶಿಕೊಹ್‌ಪುರದ ಭೂವ್ಯವಹಾರದಲ್ಲಿ ಹಣ ಅಕ್ರಮ ವರ್ಗಾವಣೆ ನಡೆಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಜಾರಿಗೊಳಿಸಿದ್ದ ಸಮನ್ಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಉದ್ಯಮಿ ರಾಬರ್ಟ್ ವಾದ್ರಾ ಬೇಷರತ್ತಾಗಿ ಹಿಂಪಡೆದುಕೊಂಡಿದ್ದಾರೆ.
ತಮ್ಮ ಸೂಚನೆಯಂತೆ ಅರ್ಜಿದಾರರು ಬೇಷರತ್ತಾಗಿ ಅರ್ಜಿ ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದು, ಪ್ರಕರಣ ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಸೆಳೆದರು.
'ರಾಬರ್ಟ್ ವಾದ್ರಾ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಸೂಕ್ತ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಲಿದ್ದಾರೆ' ಎಂದು ವಾದ್ರಾ ಪರ ವಕೀಲರು ತಿಳಿಸಿದರು.
ರಾಬರ್ಟ್ ವಾದ್ರಾ ಅವರು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ.
'ಕಕ್ಷಿದಾರರ ಎಲ್ಲ ಹಕ್ಕು ಹಾಗೂ ವಾದಗಳನ್ನು ಮುಕ್ತವಾಗಿಡಲಾಗಿದ್ದು, ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ' ಎಂದು ನ್ಯಾಯಮೂರ್ತಿ ಮನೋಜ್ ಜೈನ್ ತಿಳಿಸಿದರು.

