ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು(ನೀಟ್-ಯುಜಿ) 2027ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ) ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ, ಶಿಕ್ಷಣ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು.
ಅದರ ನಂತರ ನಡೆದ ಸುದ್ಧಿಗೋಷ್ಠಿಯಲ್ಲಿ ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಬೆನ್ನಲ್ಲೇ ಮೇ 3ರಂದು ನಡೆದಿದ್ದ ನೀಟ್-ಯುಜಿ 2026 ಪರೀಕ್ಷೆ ರದ್ದಾಗಿದ್ದು, ಜೂನ್ 21ರಂದು ಮರು ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಅದು ಈಗಿರುವ ವಿಧಾನದಲ್ಲೇ ನಡೆಯಲಿದೆ. ಮುಂದಿನ ಬಾರಿಯಿಂದ ಸಿಬಿಟಿ ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪರೀಕ್ಷೆಯನ್ನು ನ್ಯಾಯಯುತ ಮತ್ತು ದೋಷವಿಲ್ಲದಂತೆ ನಡೆಸಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಮೇ 3ರಂದು 5,400 ಕೇಂದ್ರಗಳಲ್ಲಿ ನಡೆದಿದ್ದ ನೀಟ್-ಯುಜಿ ಪರೀಕ್ಷೆಯಲ್ಲಿ 22.79 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಬೆನ್ನಲ್ಲೇ ಮೇ 12ರಂದು ಪರೀಕ್ಷೆಯನ್ನು ಎನ್‌ಟಿಎ ರದ್ದುಗೊಳಿಸಿತ್ತು.

