ನವದೆಹಲಿ(PTI): 'ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸುವುದು ಸಂವಿಧಾನದ ಮೂಲ ರಚನೆಯ ಭಾಗವೇ ಆಗಿದೆ. ಹೀಗಾಗಿ, ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಇದನ್ನು ಖಾತ್ರಿಪಡಿಸಲು ಸಾಧ್ಯ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರ (ಇ.ಸಿ) ನೇಮಕಕ್ಕೆ ಸಂಬಂಧಿಸಿ ರೂಪಿಸಲಾಗಿರುವ ನೂತನ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ 6 ಅರ್ಜಿಗಳ ಕುರಿತು ಅಂತಿಮ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಹಾಗೂ ಸತೀಶಚಂದ್ರ ಶರ್ಮಾ ಅವರನ್ನು ಒಳಗೊಂಡ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಯಿತು.
ಈ ಕಾಯ್ದೆ ಪ್ರಕಾರ, ಪ್ರಧಾನಿ, ಕೇಂದ್ರ ಸಚಿವ ಸಂಪುಟದ ಒಬ್ಬ ಸಚಿವ ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕನನ್ನು ಒಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನಂತೆ ರಾಷ್ಟ್ರಪತಿಯವರು ಸಿಇಸಿ ಹಾಗೂ ಇ.ಸಿ.ಯವರನ್ನು ನೇಮಕ ಮಾಡುತ್ತಾರೆ.
ಈ ಹೊಸ ಕಾನೂನಿನಂತೆ, ಮೂವರು ಸದಸ್ಯರು ಇರುವ ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಬದಲಾಗಿ ಕೇಂದ್ರ ಸಚಿವ ಸಂಪುಟದ ಒಬ್ಬ ಸಚಿವರು ಇರಲಿದ್ದಾರೆ.
ವಿಚಾರಣೆ ವೇಳೆ, ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರ ನಿವೇದನೆಗಳನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾ. ದತ್ತ, 'ಆಯೋಗವು ಸ್ವತಂತ್ರವಾಗಿ ಇದ್ದರಷ್ಟೆ ಸಾಲದು. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ಕಂಡುಬರುವುದು ಅಗತ್ಯ' ಎಂದರು.
ಆಗ, 'ಊಹೆಗಳಿಂದ ಕೂಡಿದ ಪಕ್ಷಪಾತ ಆಧಾರದಲ್ಲಿ ಈ ಕಾನೂನನ್ನು ನ್ಯಾಯಾಲಯ ರದ್ದು ಮಾಡಬಾರದು. ಇಂತಹ ಕ್ರಮಗಳ ಮೂಲಕ ನ್ಯಾಯಾಲಯವು ಶಾಸನಸಭೆಯ ಕಾರ್ಯವ್ಯಾಪ್ತಿಯನ್ನು ಪ್ರವೇಶಿಸಿದಂತಾಗಲಿದೆ ಇಲ್ಲವೇ ಸಂಸತ್‌ನ ಮತ್ತೊಂದು ಸದನದ ರೀತಿ ವರ್ತಿಸಿದಂತಾಗಲಿದೆ' ಎಂದು ವೆಂಕಟರಮಣಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ದತ್ತ, 'ನ್ಯಾಯಾಂಗ ಕುರಿತು ಸಂಸತ್ ಏನನ್ನಾದರೂ ಹೇಳಬಹುದು. ನಮಗೆ ನಮ್ಮ ಲಕ್ಷ್ಮಣ ರೇಖೆ ಬಗ್ಗೆ ಅರಿವಿದೆ. ಅದನ್ನು ಎಂದಿಗೂ ದಾಟುವುದಿಲ್ಲ' ಎಂದರು.
ವಾದ-ಪ್ರತಿವಾದಗಳನ್ನು ಆಲಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.
ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಕೇರಳಂನ ಶಬರಿಮಲೆ ದೇವಸ್ಥಾನ ಸೇರಿದಂತೆ ವಿವಿಧ ಧರ್ಮಗಳ ಪೂಜಾ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ಹಾಗೂ ತಾರತಮ್ಯಕ್ಕೆ ಸಂಬಂಧಿಸಿದ ಅರ್ಜಿಗಳ ಅಂತಿಮ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ವಿಸ್ತೃತ ಪೀಠವು ತೀರ್ಪನ್ನು ಗುರುವಾರ ಕಾಯ್ದಿರಿಸಿದೆ.
ಸಿಜೆಐ ಸೂರ್ಯಕಾಂತ್ ನೇತೃತ್ವದ ಸಾಂವಿಧಾನಿಕ ಪೀಠವು ಅರ್ಜಿಗಳ ವಿಚಾರಣೆಯನ್ನು 16 ದಿನ ನಡೆಸಿತಲ್ಲದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಸಿ.ಎಸ್. ವೈದ್ಯನಾಥನ್, ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹಟಗಿ, ಇಂದಿರಾ ಜೈಸಿಂಗ್, ನೀರಜ್ ಕಿಶನ್ ಕೌಲ್ ಮತ್ತು ಗೋಪಾಲ್
ಶಂಕರನಾರಾಯಣನ್ ಅವರ ವಾದವನ್ನು ಆಲಿಸಿತು.
ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ ಕುಮಾರ್, ಆಗಸ್ಟಿನ್ ಜಾರ್ಜ್ ಮಸೀಹ್, ಪ್ರಸನ್ನ ಬಿ. ವರಾಳೆ, ಆರ್. ಮಹಾದೇವನ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರು ಇದ್ದಾರೆ.
ವಿಚಾರಣೆಗೂ ಮುನ್ನ ಕೇಂದ್ರ ಸರ್ಕಾರವು ಲಿಖಿತವಾಗಿ ತನ್ನ ವಾದ ಮಂಡಿಸಿದೆ. ಶಬರಿಮಲೆ ದೇವಸ್ಥಾನಕ್ಕೆ ಋತುಸ್ರಾವ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಎತ್ತಿಹಿಡಿಯುವಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ಈ ವಿಷಯವು ಧಾರ್ಮಿಕ ನಂಬಿಕೆಯ ವ್ಯಾಪ್ತಿಯೊಳಗೆ ಬರುತ್ತದೆ ಮತ್ತು ನ್ಯಾಯಾಂಗದ ಪರಿಶೀಲನೆಯ ವ್ಯಾಪ್ತಿಯನ್ನು ಮೀರಿದೆ ಎಂದು ಸರ್ಕಾರ ಹೇಳಿದೆ.

