ಪುಣೆ/ನಾಗ್ಪುರ: ವೈದ್ಯಕೀಯ ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆಯೊಂದರಲ್ಲಿ ಕಚ್ಚಾ ಬಾಂಬ್ (ಐಇಡಿ) ಇಟ್ಟಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಇದರಲ್ಲಿ ಯಾವುದೇ ಭಯೋತ್ಪಾದನಾ ಕೃತ್ಯದ ಉದ್ದೇಶವಿರಲಿಲ್ಲ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಸಂಜೆ ಪುಣೆಯ ಹಡಪ್ಸರ್ ಪ್ರದೇಶದ ಉಷಾಕಿರಣ ಆಸ್ಪತ್ರೆಯ ಶೌಚಾಲಯದಲ್ಲಿ ಐಇಡಿ ಪತ್ತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ ಅದನ್ನು ನಿಷ್ಕ್ರಿಯಗೊಳಿಸಿತ್ತು.
ಪ್ರಕರಣ ಸಂಬಂಧ ಶಿವಾಜಿ ರಾಥೋಡ್ (30) ಎಂಬಾತನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಗ್ಪುರದಲ್ಲಿ ಬಂಧಿಸಿತ್ತು.
ಮೇ 10ರಂದು ಶಿವಾಜಿ ರಾಥೋಡ್ ಚಿಕಿತ್ಸೆಗಾಗಿ ಉಷಾಕಿರಣ ಆಸ್ಪತ್ರೆಗೆ ಭೇಟಿ ನೀಡಿದ್ದ. ಆದರೆ ಆಸ್ಪತ್ರೆಯವರು ಕೊಟ್ಟ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿ ನೋಡಿ ಕಂಗಾಲಾಗಿದ್ದ. ಅಷ್ಟು ಹಣ ಹೊಂದಿಸಲು ತನ್ನಿಂದ ಸಾಧ್ಯವಿಲ್ಲ ಎಂದುಕೊಂಡ ಆತ, ಆಸ್ಪತ್ರೆಯವರನ್ನು ಹೆದರಿಸಿ ಹಣ ವಸೂಲಿ ಮಾಡಲು ನಿರ್ಧರಿಸಿದ್ದ. ಅದಕ್ಕಾಗಿ ಆಸ್ಪತ್ರೆಯಲ್ಲೇ ಬಾಂಬ್ ಇಡುವ ಸಂಚು ರೂಪಿಸಿದ್ದ ಎಂದು ಕುಮಾರ್ ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಆಧಾರಿಸಿ ರಾಥೋಡ್‌ನನ್ನು ಪತ್ತೆಹಚ್ಚಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯ ಮಂಜರಿ ಪ್ರದೇಶದಲ್ಲಿ ಶಿವಾಜಿ ರಾಥೋಡ್ ಬಟ್ಟೆ ಅಂಗಡಿ ನಡೆಸುತ್ತಿದ್ದ. ಅಂಗಡಿಯಲ್ಲಿ ಶೋಧ ನಡೆಸಿದಾಗ, ಐಇಡಿಯಲ್ಲಿ ಬಳಸಿದ ಟೈಮರ್‌ನ ಖಾಲಿ ಬಾಕ್ಸ್ ಪತ್ತೆಯಾಗಿದೆ.
ಆಸ್ಪತ್ರೆಯಲ್ಲಿ ಇಟ್ಟಿದ್ದ ಸಾಧನದಲ್ಲಿ ಯಾವುದೇ ಸ್ಫೋಟಕ ವಸ್ತು ಇರಲಿಲ್ಲ. ಅದು ನಕಲಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ರಾಥೋಡ್ ಆನ್‌ಲೈನ್‌ನಲ್ಲಿ ಟೈಮರ್ ಗಡಿಯಾರವನ್ನು ಖರೀದಿಸಿದ್ದ. ಬಳಿಕ ಹಾರ್ಡ್‌ವೇರ್ ಅಂಗಡಿಯಿಂದ ಪೈಪ್‌ಗಳನ್ನು ಖರೀದಿಸಿದ್ದ. ಬಳಿಕ ಯೂಟ್ಯೂಬ್ ವಿಡಿಯೊ ನೋಡಿ ಆ ಸಾಧನವನ್ನು ಜೋಡಿಸಿದ್ದ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

