ಆದರೆ, ಈ ಆಂದೋಲನದ ಸ್ಥಾಪಕ ಹಾಗೂ ಅಮೆರಿಕದಲ್ಲಿ ವಿದ್ಯಾರ್ಥಿಯಾಗಿರುವ ಅಭಿಜಿತ್ ದೀಪ್ಕೆಯ ಯಾವುದೇ ಉಲ್ಲೇಖ ಈ ಅರ್ಜಿಯಲ್ಲಿಲ್ಲ.
ತನ್ನನ್ನು ಕಾಕ್ರೋಚ್ ಜನತಾ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಎಂಬುದಾಗಿ ಕರೆದುಕೊಂಡಿರುವ ವಕೀಲ ಸುಧೀರ್ ಜಾಖರ್, ಜನತಾ ಪ್ರಾತಿನಿಧ್ಯ ಕಾಯ್ದೆಯ 29ಎ ಪರಿಚ್ಛೇದದಡಿ ಪಕ್ಷವನ್ನು ನೋಂದಾಯಿಸುವಂತೆ ಕೋರಿ ಭಾರತೀಯ ಚುನಾವಣಾ ಆಯೋಗದ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಜೊತೆಗೆ ಸಿಜೆಪಿಯ ಜಿರಳೆ ಲಾಂಛನವನ್ನೂ ಸಲ್ಲಿಸಿದ್ದಾರೆ. ಒಂದು ವೇಳೆ, ಸಿಜೆಪಿಯು ಜಾಖರ್ರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟರೆ, ಗುಂಪಿನ ಸಾಮಾಜಿಕ ಮಾಧ್ಯಮ ಖಾತೆಗಳ ನಿಯಂತ್ರಣವು ಅವರಿಗೆ ಹೋಗಬಹುದಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್, ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ಬಳಿಕ, ಕೇವಲ 10 ದಿನಗಳ ಹಿಂದೆ ಕಾಕ್ರೋಚ್ ಜನತಾ ಪಕ್ಷ ಹುಟ್ಟಿಕೊಂಡಿತು. ''ಜಿರಳೆಗಳಂಥ ಯುವಜನರಿದ್ದಾರೆ. ಅವರಿಗೆ ಕೆಲಸ ಸಿಗುವುದಿಲ್ಲ ಅಥವಾ ಯಾವುದೇ ವೃತ್ತಿಯಲ್ಲಿ ಅವರಿಗೆ ಸ್ಥಾನವಿಲ್ಲ. ಅವರ ಪೈಕಿ ಕೆಲವರು ಮಾಧ್ಯಮಗಳಿಗೆ ಹೋಗುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುತ್ತಾರೆ, ಆರ್‌ಟಿಐ ಕಾರ್ಯಕರ್ತರು ಮತ್ತು ಇತರ ಕಾರ್ಯಕರ್ತರಾಗುತ್ತಾರೆ. ಬಳಿಕ ಅವರು ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಾರೆ'' ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದ್ದರು.
ಕೇವಲ ಐದೇ ದಿನಗಳಲ್ಲಿ ಸಿಜೆಪಿಯ ಎಕ್ಸ್ ಖಾತೆಯನ್ನು ಸ್ಥಗಿತಗೊಳಿಸಲಾಯಿತು. ಅದರ ಇನ್ಸ್ಟಾಗ್ರಾಮ್ ಖಾತೆಯ ಫಾಲೋವರ್‌ಗಳ ಸಂಖ್ಯೆ ಬಿಜೆಪಿಯ ಸಂಖ್ಯೆಯನ್ನು ಹಿಂದಿಕ್ಕಿತು. ಗುಂಪಿನ ಆನ್‌ಲೈನ್ ಸದಸ್ಯತ್ವ ಅರ್ಜಿಗಳಿಗೆ ಸಾವಿರಾರು ಜನರು ಸಹಿ ಹಾಕಿದರು.
ದೀಪ್ಕೆ ಭಾರತಕ್ಕೆ ಮರಳಲು ನಿರಾಕರಿಸಿದರೆ?
ಪಕ್ಷವು ದೀಪ್ಕೆಯನ್ನು ಸಂಪರ್ಕಿಸಿ, ನೋಂದಾವಣೆಗಾಗಿ ಭಾರತಕ್ಕೆ ಮರಳುವಂತೆ ಕೋರಿತು ಎಂದು ಜಾಖರ್ ಹೇಳಿದರು. ಆದರೆ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ದೀಪ್ಕೆ ಭಾರತಕ್ಕೆ ಬರಲು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.
''ಭಾರತಕ್ಕೆ ಮರಳಲು ಹಾಗೂ ಈ ಚಳವಳಿಯನ್ನು ತಳ ಮಟ್ಟದ ವಾಸ್ತವಿಕ ರಾಜಕೀಯ ಪಕ್ಷವಾಗಿ ಪರಿವರ್ತಿಸಲು ದೀಪ್ಕೆ ನಿರಾಕರಿಸಿದ್ದಾರೆ. ಯುವಜನರ ಆಕ್ರೋಶ ಮತ್ತು ಈವರೆಗಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಬೇರೆ ಯಾರಾದರೂ ಮೊದಲು ಈ ಹೆಸರನ್ನು ನೋಂದಾಯಿಸಿದರೆ ಅದು ದುರ್ಬಳಕೆಯಾಗಬಹುದು ಹಾಗೂ ಇಡೀ ಚಳವಳಿ ಕಳೆದುಹೋಗಬಹುದು ಎಂದು ನಾವು ಭಾವಿಸಿದೆವು. ಹಾಗೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ನಾವೇ ಈ ಕ್ರಮ ತೆಗೆದುಕೊಂಡೆವು'' ಎಂದು ಜಾಖರ್ ಹೇಳಿಕೊಂಡರು.

