ಜೈಪುರ: ಪ್ರತಿ ಮನೆಗೂ ನಳ್ಳಿ ನೀರು ಒದಗಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗೆ ಸಂಬಂಧಿಸಿದ 960 ಕೋಟಿ ರೂಪಾಯಿ ಮೊತ್ತದ ಜಲ್ ಜೀವನ್ ಮಿಷನ್ ಹಗರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಾಜಸ್ಥಾನದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಯ (ಪಿಎಚ್‌ಇಡಿ) ಮಾಜಿ ಸಚಿವ ಮಹೇಶ್ ಜೋಶಿ ಅವರನ್ನು ಬಂಧಿಸಿದೆ.
ಪಿಎಚ್‌ಇಡಿಯ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸುಬೋಧ್ ಅಗರ್ವಾಲ್ ಅವರ ಬಂಧನವಾದ ಕೆಲವೇ ದಿನಗಳ ಬಳಿಕ, ಹಿಂದಿನ ಅಶೋಕ್ ಗೆಹ್ಲೋಟ್ ಸರ್ಕಾರದ ಸಂಪುಟ ಸಚಿವರಾಗಿದ್ದ ಮಹೇಶ್ ಜೋಶಿ ಅವರನ್ನು ಬಂಧಿಸಲಾಗಿದೆ.
ಮಹೇಶ್ ಜೋಶಿ ಅವರನ್ನು ಜೈಪುರದಲ್ಲಿರುವ ಅವರ ನಿವಾಸದಿಂದ ಎಸಿಬಿ ಅಧಿಕಾರಿಗಳು ಗುರುವಾರ ಮುಂಜಾನೆ ಬಂಧಿಸಿದ್ದಾರೆ.
ಎಸಿಬಿ ಅಧಿಕಾರಿಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪಿಎಚ್‌ಇಡಿ ಸಚಿವರಾಗಿದ್ದಾಗ ಟೆಂಡರ್ ನೀಡುವ ಸಲುವಾಗಿ ಮಹೇಶ್ ಜೋಶಿ ಲಂಚ ಸ್ವೀಕರಿಸಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿ ಮಹೇಶ್ ಜೋಶಿ ವಿರುದ್ಧ ಎಸಿಬಿ 2024ರಲ್ಲಿ ಎಫ್‌ಐಆರ್ ದಾಖಲಿಸಿತ್ತು.
ಎಸಿಬಿ ತನಿಖೆಯ ಜೊತೆಗೆ ಜಾರಿ ನಿರ್ದೇಶನಾಲಯ (ED) ಕೂಡ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಯಮಗಳ ಅಡಿಯಲ್ಲಿ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. 2025ರಲ್ಲಿ ಜೋಶಿ ಅವರನ್ನು ED ಬಂಧಿಸಿತ್ತು. ಅನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯುವವರೆಗೆ ಅವರು ಸುಮಾರು 7 ತಿಂಗಳು ಕಾರಾಗೃಹದಲ್ಲಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಈ ವರ್ಷದ ಆರಂಭದಲ್ಲಿ ಫೆಬ್ರುವರಿ 17ರಂದು ಎಸಿಬಿ ರಾಜಸ್ಥಾನದಾದ್ಯಂತ ಸುಮಾರು 15 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಲ್ಲದೆ, 10 ಮಂದಿ ಎಂಜಿನಿಯರ್‌ಗಳನ್ನು ವಶಕ್ಕೆ ಪಡೆದುಕೊಂಡಿತ್ತು. ತರುವಾಯ ಎಸಿಬಿ ದೀರ್ಘಕಾಲ ತನಿಖಾಧಿಕಾರಿಗಳಿಂದ ತಲೆಮರೆಸಿಕೊಂಡಿದ್ದ ಡಾ. ಸುಬೋಧ್ ಅಗರ್ವಾಲ್ ಅವರನ್ನು ಬಂಧಿಸಿತ್ತು.
ಪ್ರಸ್ತುತ ಈ ಪ್ರಕರಣದ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಘೋಷಿತ ಅಪರಾಧಿಗಳು ಎಂದು ಪ್ರಕಟಿಸಲಾಗಿದೆ. ಎಸಿಬಿ ಈಗಾಗಲೇ ಅವರ ಸೊತ್ತುಗಳ ವಿವರಗಳನ್ನು ಸಂಗ್ರಹಿಸಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಅವರ ಸೊತ್ತುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

