ಶ್ರೀನಗರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ 2025ರ ಮೇ 7ಕ್ಕೆ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಗುರುವಾರದಂದು ಸಿಂಧೂರ ಕಾರ್ಯಾಚರಣೆಗೆ ಒಂದು ವರ್ಷ ತುಂಬಲಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ ಉದ್ಧಕ್ಕೂ ಭದ್ರತೆ ಗಣನೀಯವಾಗಿ ಹೆಚ್ಚಿಸಲಾಗಿದ್ದರೂ ಆತಂಕ ಇನ್ನೂ ಉಳಿದಿದೆ.
ಪೂಂಚ್, ರಜೌರಿ ಮತ್ತು ಕುಪ್ವಾರದಂತಹ ಗಡಿ ಜಿಲ್ಲೆಗಳಲ್ಲಿ ಈಗಲೂ ಲೋಪದೋಷಗಳು ಎದ್ದು ಕಾಣಿಸುತ್ತಿವೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿ ನಡೆದಿತ್ತು. ಇದು ನಾಗರಿಕರನ್ನು ಗುರಿಯಾಗಿಸಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿತ್ತು.
ಭದ್ರತಾ ಅಧಿಕಾರಿಗಳ ಪ್ರಕಾರ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಕಣ್ಗಾವಲು ವ್ಯವಸ್ಥೆ, ಡ್ರೋನ್ ವಿರೋಧಿ ವ್ಯವಸ್ಥೆಗಳು ಮತ್ತು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ನುಸುಳುವಿಕೆ ತಡೆಯಲು ಹೆಚ್ಚಿನ ನಿಗಾ ವಹಿಸಲಾಗಿದೆ. ಅಲ್ಲದೆ ಭದ್ರತಾ ಪಡೆಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲಾಗಿದೆ.
ಭಾರತದ ಗಡಿ ದಾಟಿದರೆ ತಕ್ಕ ಪ್ರತ್ಯುತ್ತರ: 'ಆಪರೇಷನ್ ಸಿಂಧೂರ' ನೆನೆದ ಭಾರತೀಯ ಸೇನೆಆಪರೇಷನ್ ಸಿಂಧೂರ ಕಾರ್ಯಾಚರಣೆ: ಹುತಾತ್ಮರಾದ ಯೋಧರಿಗೆ ರಜೌರಿಯಲ್ಲಿ ಯುದ್ಧ ಸ್ಮಾರಕ
ಆದರೂ ಭಯೋತ್ಪಾದಕರು ನುಸುಳಲು ಪ್ರಯತ್ನಿಸುತ್ತಿರುವುದು ಇಂದಿಗೂ ಸವಾಲಾಗಿ ಪರಿಣಮಿಸಿದೆ. ಅಲ್ಲದೆ ಕಳೆದೊಂದು ವರ್ಷದಲ್ಲಿ ಯಾವುದೇ ಸಂಘಟಿತ ದಾಳಿ ನಡೆದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ ಪೂಂಚ್‌ನಲ್ಲಿ ನಡೆದ ಶೆಲ್ ದಾಳಿಯಲ್ಲಿ 14 ನಾಗರಿಕರು ಮೃತಪಟ್ಟಿದ್ದರು. ಇದು ಗಡಿಯಲ್ಲಿ ಸ್ಥಳೀಯರ ಭದ್ರತೆಗೆ ಸಂಬಂಧಪಟ್ಟಂತೆ ಆತಂಕಕ್ಕೆ ಕಾರಣವಾಗಿದೆ.
ಗಡಿ ಭಾಗದ ಜನರಿಗೆ ಸುರಕ್ಷಿತ ಬಂಕರ್ ನಿರ್ಮಿಸಿಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. 2018ರಲ್ಲಿ ಕೇಂದ್ರವು 14 ಸಾವಿರ ಬಂಕರ್‌ಗಳಿಗೆ ಫಂಡ್ ಬಿಡುಗಡೆ ಮಾಡಿತ್ತು. ಆದರೆ, ಪೂಂಚ್‌ನಂತಹ ಪ್ರದೇಶಗಳಲ್ಲಿ ಇನ್ನೂ ಅನೇಕ ಕುಟುಂಬಗಳಿಗೆ ಸರಿಯಾದ ಬಂಕರ್ ಸೌಲಭ್ಯ ದೊರೆತಿಲ್ಲ. ಭದ್ರತೆ ಹೆಚ್ಚಾದರೂ ಗಡಿಯ ದುರ್ಗಮ ಪ್ರದೇಶಗಳಲ್ಲಿ ಅನೇಕ ಲೋಪದೋಷಗಳಿವೆ. ಕಣಿವೆ ಪ್ರದೇಶಗಳಲ್ಲಿ ಭಯೋತ್ಪಾದಕ ನುಸುಳುವಿಕೆ ಸವಾಲಾಗಿ ಪರಿಣಮಿಸಿದೆ.
'ನಮ್ಮಲ್ಲಿ ಇನ್ನೂ ಬೇಕಾದಷ್ಟು ಬಂಕರ್‌ಗಳಿಲ್ಲ. ಶೆಲ್ ದಾಳಿ ನಡೆದಾಗ ನಿಜವಾದ ಪರಿಸ್ಥಿತಿ ಬಯಲಾಗುತ್ತದೆ' ಎಂದು ಪೂಂಚ್‌ನ ಮಂಧಾರ್ ಗ್ರಾಮದ ನಿವಾಸಿ ಬಶೀರ್ ಖಾತಾನ ಆತಂಕ ವ್ಯಕ್ತಪಡಿಸುತ್ತಾರೆ.
'ಬಂಕರ್ ಸಾಕಾಗುವುದಿಲ್ಲ ಎಂಬುದನ್ನು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ನಿರ್ಮಾಣ ಕಾರ್ಯವು ಹಂತಹಂತವಾಗಿ ನಡೆಯುತ್ತಿದೆ. ಆದರೆ ಕ್ಲಿಷ್ಟಕರ ಭೂಪ್ರದೇಶ ಹಾಗೂ ಸಾಗಣಿಕೆ ಸವಾಲುಗಳಿಂದ ವಿಳಂಬವಾಗುತ್ತಿದೆ' ಎಂದಿದ್ದಾರೆ.
ಗಡಿ ಭಾಗದ ಜನರು ಇಂದಿಗೂ ಯುದ್ಧದ ಭೀತಿಯಲ್ಲೇ ಬದುಕುತ್ತಿದ್ದಾರೆ. ಸರ್ಕಾರದ ಪರಿಹಾರ ಧನದ ಬದಲು ಶಾಶ್ವತ ಸುರಕ್ಷತೆಗಾಗಿ ಬಯಸುತ್ತಿದ್ದಾರೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕದನ ವಿರಾಮ ಉಲ್ಲಂಘನೆಯು ಸೀಮಿತವಾಗಿದೆ. ವಿರಳವಾದ ಘಟನೆಗಳಷ್ಟೇ ವರದಿಯಾಗಿವೆ. ಆದರೂ ಎಲ್‌ಒಸಿ ಸೂಕ್ಷ್ಮ ಪ್ರದೇಶವಾಗಿ ಮುಂದುವರಿದಿದ್ದು, ಉಗ್ರರ ಜಾಲವನ್ನು ಮಟ್ಟ ಹಾಕಲು ಭದ್ರತಾ ಪಡೆಗಳು ಮುನ್ನಚ್ಚೆರಿಕೆ ವಹಿಸುತ್ತಿವೆ.
ಪ್ರವಾಸೋದ್ಯಮ ಚಟುವಟಿಕೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪ್ರದೇಶದಲ್ಲಿ ಸಹಜ ಸ್ಥಿತಿ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಸ್ಥಳೀಯರಲ್ಲಿ ಕಳೆದ ವರ್ಷದ ಕರಾಳ ನೆನಪುಗಳು ಮರುಕಳಿಸುತ್ತಿವೆ.
ಸಿಂಧೂರ ಕಾರ್ಯಾಚರಣೆಗೆ ಒಂದು ವರ್ಷ ತುಂಬಿದಂತೆ ಉದ್ವಿಗ್ನತೆ ಹೆಚ್ಚಾದಗೆಲ್ಲಾ ಭೀತಿ ಉಂಟಾಗುತ್ತದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ. ತಜ್ಞರ ಪ್ರಕಾರ ಮಿಲಿಟರಿ ಸನ್ನದ್ಧತೆಯ ಜೊತೆಗೆ ಬಂಕರ್‌ಗಳು, ಎಚ್ಚರಿಕಾ ವ್ಯವಸ್ಥೆಗಳು ಸೇರಿದಂತೆ ಮೂಲಸೌಕರ್ಯ ವೃದ್ಧಿಯಲ್ಲಿ ನಿರಂತರ ಹೂಡಿಕೆಯ ಅಗತ್ಯವಿದೆ.

