ಪಂಜಾಬ್: ಜಲಂಧರ್‌ನಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ಅಮೃತಸರದ ಖಾಸಾ ಪ್ರದೇಶದಲ್ಲಿರುವ ಸೇನಾ ಕಂಟೋನ್ಮೆಂಟ್ ಸಮೀಪ ಮತ್ತೊಂದು ಸ್ಫೋಟದ ಬಗ್ಗೆ ವರದಿಯಾಗಿದೆ. ಇದರಿಂದ ಜನರಲ್ಲಿ ಆತಂಕ ಮನೆಮಾಡಿದೆ.ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಸರದ ಎಸ್‌ಎಸ್‌ಪಿ ಸುಹೈಲ್ ಮಿರ್ ಕಾಸಿಮ್ ಪ್ರತಿಕ್ರಿಯಿಸಿ, 'ರಾತ್ರಿ 11 ಗಂಟೆ ಸುಮಾರಿಗೆ ಖಾಸಾ ರಸ್ತೆಯಲ್ಲಿ ಭಾರಿ ಶಬ್ದ ಕೇಳಿಬಂದ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ನಮ್ಮ ತಂಡ ಸ್ಥಳಕ್ಕೆ ಧಾವಿಸಿತು' ಎಂದರು. ಪ್ರಾಥಮಿಕ ತನಿಖೆಯ ಪ್ರಕಾರ, ಯಾರೋ ಕಿಡಿಗೇಡಿಗಳು ಗೋಡೆಯತ್ತ ಯಾವುದೋ ವಸ್ತುವನ್ನು ಎಸೆದ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ತಂಡ ಮತ್ತು ಬಾಂಬ್ ಪತ್ತೆ ದಳ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿವೆ. ಅಲ್ಲದೇ ಪೊಲೀಸ್ ಅಧೀಕ್ಷಕ ಆದಿತ್ಯ ಎಸ್ ವಾರಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ. ಸೇನಾ ಅಧಿಕಾರಿಗಳ ತಂಡವೂ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿ ಹೊರಗೆ ಸ್ಫೋಟ ಸಂಭವಿಸಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.
ಜಲಂಧರ್‌ನ ಬಿಎಸ್‌ಎಫ್ ಚೌಕ್ ಬಳಿ ನಿಲ್ಲಿಸಿದ್ದ ಸ್ಕೂಟರ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ವಾಹನದಿಂದ ಸ್ಫೋಟದಂತಹ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. 'ಪ್ರಾಥಮಿಕವಾಗಿ ಇಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ವಾಹನ ಸವಾರರಿಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ' ಎಂದು ಜಲಂಧರ್ ಪೊಲೀಸ್ ಕಮಿಷನರ್ ಧನ್‌ಪ್ರೀತ್ ಕೌರ್ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬಿಗಿ ಭದ್ರತೆ ಒದಗಿಸಿದ್ದಾರೆ.

