ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ(ಒಎಸ್‌ಡಿ) ಆಗಿ ನೇಮಕ ಮಾಡಿಕೊಂಡಿದ್ದಾರೆ.
ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ(ಒಎಸ್‌ಡಿ) ನೇಮಕ ಮಾಡಲಾಗಿದೆ.
ಈ ಸಂಬಂಧಿತ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಪ್ರತ್ಯೇಕವಾಗಿ ಪ್ರಕಟಣೆ ಹೊರಡಿಸಲಾಗುವುದು ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ರೀಟಾ ಹರೀಶ್ ಠಕ್ಕರ್ ಹೇಳಿದ್ದಾರೆ.
ಚುನಾವಣೆಗೆ ಮುನ್ನವೇ ಪಂಡಿತ್ ವೆಟ್ರಿವೇಲ್ ಅವರು ವಿಜಯ್ ಅವರ ಅಭೂತಪೂರ್ವ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು ಎಂದು ನಂಬಲಾಗಿದೆ. ಈ ಹಿಂದೆ, ವಿಜಯ್ ಅವರು ತಮ್ಮ ಪ್ರಮಾಣ ವಚನ ಸಮಾರಂಭವನ್ನು ಮೇ 10ರ ಮಧ್ಯಾಹ್ನ 3:45ಕ್ಕೆ ನಿಗದಿಪಡಿಸಿದ್ದರು. ಬಳಿಕ, ಬೆಳಿಗ್ಗೆ 10ಕ್ಕೆ ಅದನ್ನು ಮರು ನಿಗದಿಪಡಿಸಲಾಗಿತ್ತು. ವರದಿಗಳ ಪ್ರಕಾರ, ಈ ಬದಲಾವಣೆಯನ್ನು ವೆಟ್ರಿವೇಲ್ ಸೂಚಿಸಿದ್ದರು. ಹೊಸ ಸಮಯ ಹೆಚ್ಚು ಶುಭ ಎಂದು ಹೇಳಿದ್ದರು ಎಂಬುದಾಗಿ ವರದಿ ತಿಳಿಸಿದೆ.
ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಯಾರು?
ತಮಿಳುನಾಡಿನ ಈರೋಡ್ ಮೂಲದ ವೆಟ್ರಿವೇಲ್ ಅವರು ಜ್ಯೋತಿಷಿಯಾಗಿದ್ದಾರೆ. ವೈದಿಕ ಜ್ಯೋತಿಷ, ಧ್ಯಾನ ಆಧಾರಿತ ಮಾರ್ಗದರ್ಶನ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅವರಿಗೆ ನಾಲ್ಕು ದಶಕಗಳಿಗೂ ಹೆಚ್ಚಿನ ಅನುಭವವಿದೆ. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸೇರಿದಂತೆ ಹಲವು ಗಣ್ಯರು ಇವರ ಬಳಿ ಜ್ಯೋತಿಷ ಕೇಳುತ್ತಿದ್ದರು ಎಂದು ವರದಿಯಾಗಿದೆ.
ಜೆ. ಜಯಲಲಿತಾ ಅವರೊಂದಿಗಿನ ವೆಟ್ರಿವೇಲ್ ಅವರ ಸಂಬಂಧ
1991ರ ವಿಧಾನಸಭಾ ಚುನಾವಣೆಯಲ್ಲಿ ಜಯಲಲಿತಾ ಅವರ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದೆ. 1994 ಮತ್ತು 1997ರ ನಡುವಿನ ಕಠಿಣ ಪರಿಸ್ಥಿತಿ ಬಗ್ಗೆಯೂ ಅವರಿಗೆ ಎಚ್ಚರಿಕೆ ನೀಡಿದ್ದಾಗಿ ವೆಟ್ರಿವೇಲ್ ಹೇಳಿಕೊಂಡಿದ್ದಾರೆ. ಈ ಅವಧಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಜಯಲಲಿತಾ, 1996ರ ಡಿಸೆಂಬರ್‌ನಲ್ಲಿ ಬಂಧನಕ್ಕೊಳಗಾಗಿದ್ದರು.
ಈ ವಿದ್ಯಮಾನಗಳ ನಂತರ, ವೆಟ್ರಿವೇಲ್ ಅವರು ಜಯಲಲಿತಾರ ವೈಯಕ್ತಿಕ ಜ್ಯೋತಿಷಿಯಾಗಿ ನೇಮಕಗೊಂಡರು. ಜೆ. ಜಯಲಲಿತ ಎಂದಿದ್ದ ಅವರ ಹೆಸರನ್ನು ಜೆ. ಜಯಲಲಿತಾ ಎಂದು ಬದಲಾಯಿಸಲೂ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ, ವೆಟ್ರಿವೇಲ್ ನುಡಿದಿದ್ದ ಒಂದು ಪ್ರಮುಖ ಭವಿಷ್ಯ ಸುಳ್ಳಾದ ಕಾರಣ ಜಯಲಲಿತಾ ಅವರೊಂದಿಗಿನ ಸಂಬಂಧ ಹಳಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರು(jyllitS) ಜೈಲಿಗೆ ಹೋಗುವುದಿಲ್ಲ ಎಂದು ವೆಟ್ರಿವೇಲ್ ಹೇಳಿದ್ದರು ಎಂದು ವರದಿಯಾಗಿದೆ. ಆದರೆ, 2014ರ ಸೆಪ್ಟೆಂಬರ್‌ನಲ್ಲಿ ನ್ಯಾಯಾಲಯ ಜಯಲಲಿತಾ ವಿರುದ್ಧ ತೀರ್ಪು ನೀಡಿದ್ದರಿಂದ ಜೈಲಿಗೆ ಹೋಗಬೇಕಾಯಿತು. ಆ ಬಳಿಕ, ವೆಟ್ರಿವೇಲ್ ಬಳಿ ಭವಿಷ್ಯ ಕೇಳುವುದನ್ನು ನಿಲ್ಲಿಸಿದ್ದ ಜಯಲಲಿತಾ, ಅಂಪೂರ್ಣ ಸಂಪರ್ಕ ಕಡಿದುಕೊಂಡಿದ್ದರು.
ವಿಜಯ್ ಕುರಿತಾದ ವೆಟ್ರಿವೇಲ್ ಭವಿಷ್ಯ
ಜಯಲಲಿತಾ ಬಳಿಕ ಮುಂಬೈ, ದೆಹಲಿಯಲ್ಲಿ ಗಣ್ಯರಿಗೆ ಜ್ಯೋತಿಷ ಹೇಳುತ್ತಿದ್ದ ವೆಟ್ರಿವೇಲ್, 2024ರಿಂದ ವಿಜಯ್ ಜೊತೆ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರು ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅವರು ಬಹಿರಂಗವಾಗಿ ಭವಿಷ್ಯ ನುಡಿದಿದ್ದರು. ಚುನಾವಣೆ ಸಂದರ್ಭದಲ್ಲಿ ಯೂಟ್ಯೂಬ್ ಚಾನಲ್‌ಗಳ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದ ಅವರು, ವಿಜಯ್ ರಾಜಕೀಯವಾಗಿ ಬೆಳೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

