ಹೈದರಾಬಾದ್: ದೇಶದ ಜನರಿಗೆ ಮಿತವ್ಯಯದ ಪಾಠ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಮತ್ತು ಬಿಜೆಪಿ ನಾಯಕರಿಗೆ ವಿದೇಶಿ ವಿನಿಮಯ ಉಳಿಸುವ ಅನಿವಾರ್ಯತೆ ನೆನಪಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.ಮಿತವ್ಯಯದ ಕ್ರಮಗಳ ಮೂಲಕ ಡಾಲರ್ ಉಳಿಸಿ, ಆ ಹಣವನ್ನು ಅಮೆರಿಕದಿಂದ ತೈಲ ಖರೀದಿಸಲು ಟ್ರಂಪ್‌ಗೆ ನೀಡುವುದು ಸರ್ಕಾರದ ಉದ್ದೇಶ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, 'ಚುನಾವಣೆ ಮುಗಿದ ನಂತರ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ಬೆಲೆ ಏರಿಕೆಯಾಗಲಿದೆ ಎಂಬ ಸತ್ಯವನ್ನು ಮರೆಮಾಚಿ ಪ್ರಧಾನಿ ಮತ ಕೇಳಿದ್ದರೇ? ಈಗ ಬೆಲೆ ಏರಿಕೆಯ ಸಂಕಷ್ಟಗಳನ್ನು ಸಹಿಸಿಕೊಳ್ಳುವುದೇ ದೇಶಪ್ರೇಮ ಎಂದು ಅವರು ಜನರನ್ನು ನಂಬಿಸುತ್ತಿದ್ದಾರೆ' ಎಂದು ಕಿಡಿಕಾರಿದರು.
'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಂತೆ ತಮ್ಮಿಂದಲೇ ತೈಲ ಖರೀದಿಸುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ಡಾಲರ್ ಉಳಿಸಿ ಅದನ್ನು ಹೂಸ್ಟನ್‌ನಲ್ಲಿ ಟ್ರಂಪ್‌ಗೆ ನೀಡಲು ಪ್ರಧಾನಿ ಈಗ ಜನರಿಗೆ ಚಿನ್ನ ಖರೀದಿಸಬೇಡಿ, ವಿದೇಶಿ ಪ್ರವಾಸ ಮಾಡಬೇಡಿ, ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಎಂದು ಹೇಳುತ್ತಿದ್ದಾರೆ. ಇದರಲ್ಲೇನಾದರೂ ದೇಶಪ್ರೇಮವಿದೆಯೇ ಎಂದು ನೀವೇ ಯೋಚಿಸಿ' ಎಂದರು.
ಚುನಾವಣೆ ಸಮಯದಲ್ಲಿ ಯಾವುದೇ ಸಮಸ್ಯೆಗಳ ಬಗ್ಗೆ ಮಾತನಾಡದ ಬಿಜೆಪಿ, ಅಧಿಕಾರಕ್ಕೇರಿದ ತಕ್ಷಣ ಜನಸಾಮಾನ್ಯರ ಮೇಲೆ ಮಿತವ್ಯಯದ ಹೊರೆ ಹೊರಿಸುತ್ತಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.

