ನವದೆಹಲಿ: ನಕಲಿ ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ,ರಾಷ್ಟ್ರ ರಾಜಧಾನಿಯಲ್ಲಿ 2027ರ ಜನಗಣತಿಗಾಗಿ ಮನೆ-ಮನೆಗೆ ಭೇಟಿ ನೀಡುವ ಎಣಿಕೆದಾರರು ಮತ್ತು ಮೇಲ್ವಿಚಾರಕರನ್ನು ಗುರುತಿಸಲು ಅಧಿಕಾರಿಗಳು ಕ್ಯೂಆರ್ ಕೋಡ್ ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ.
ಮೇ 16ರಿಂದ ದಿಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭವಾಗಲಿರುವ ಈ ಮನೆ-ಮನೆ ಗಣತಿ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿಸುವುದು ಈ ಕ್ರಮದ ಉದ್ದೇಶವಾಗಿದೆ.
ಈ ಕಾರ್ಯಕ್ಕಾಗಿ ನಿಯೋಜಿಸಲಾದ ಎಲ್ಲ ಎಣಿಕೆದಾರರು ಮತ್ತು ಮೇಲ್ವಿಚಾರಕರು ಉಸ್ತುವಾರಿ ಅಧಿಕಾರಿ ನೀಡಿದ ನೇಮಕಾತಿ ಪತ್ರ ಮತ್ತು ಗುರುತಿನ ಚೀಟಿಯನ್ನು ಹೊಂದಿರುತ್ತಾರೆ. ಈ ಎರಡೂ ದಾಖಲೆಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿದ್ದು,ನಿವಾಸಿಗಳು ಅವುಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅವರ ಅಧಿಕೃತತೆಯನ್ನು ಪರಿಶೀಲಿಸಬಹುದು ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಚೇರಿಯ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.
ಯಾವುದೇ ಅನುಮಾನವಿದ್ದಲ್ಲಿ ಕುಟುಂಬದ ಸದಸ್ಯರು ಸಿಬ್ಬಂದಿಯ ನೇಮಕಾತಿ ಪತ್ರ ಮತ್ತು ಗುರುತಿನ ಚೀಟಿಯನ್ನು ಪರಿಶೀಲಿಸಬಹುದು. ನಿಜವಾದ ಸಿಬ್ಬಂದಿಗಳು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ದಾಖಲೆಗಳ ಮೇಲೆ ಮುದ್ರಿಸಲಾದ ಕ್ಯೂಆರ್ ಕೋಡ್ ಅನ್ನು ಸಹ ಸ್ಕ್ಯಾನ್ ಮಾಡಬಹುದು ಎಂದು ಅಧಿಕಾರಿಗಳು ಹೇಳಿದರು.
ದೇಶಾದ್ಯಂತ ಹಲವಾರು ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ.

