ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದ ನಡುವೆ ನೀಟ್-ಯುಜಿ ಪರೀಕ್ಷೆ ರದ್ದುಗೊಳಿಸಿರುವುದಕ್ಕೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮರುಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುತ್ತೇವೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ನೀಟ್ ಮರುಪರೀಕ್ಷೆಯನ್ನು ನ್ಯಾಯಸಮ್ಮತವಾಗಿ ನಡೆಸುತ್ತೇವೆ. ಮರುಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಜತೆಗೆ, ಮೊದಲ ಪರೀಕ್ಷೆಯಲ್ಲಿ ಪಡೆದ ಶುಲ್ಕವನ್ನು ಮರುಪಾವತಿ ಮಾಡುತ್ತೇವೆ' ಎಂದು ಹೇಳಿದ್ದಾರೆ.
'ಮೇ 3ರಂದು ನಡೆದ ನೀಟ್-ಯುಜಿ-2026 ಪರೀಕ್ಷೆಯ ಪ್ರಶ್ನೆಗಳಿಗೆ ಹೋಲುವ ಕೆಲವು ಪ್ರಶ್ನೆಗಳು ವ್ಯಾಟ್ಸ್‌ಆಯಪ್‌ನಲ್ಲಿ ಹರಿದಾಡುತ್ತಿವೆ ಎಂಬ ಮಾಹಿತಿ ಸಿಕ್ಕಿತು. ಪರೀಕ್ಷಾ ದಿನಾಂಕಕ್ಕಿಂತ ಮುಂಚಿತವಾಗಿ ಪಿಡಿಎಫ್‌ಗಳನ್ನು ಯಾರಾದರೂ ಬಳಸಿದ್ದಾರೆಯೇ ಎಂದು ತನಿಖೆ ನಡೆಸಿದಾಗ, ಕೆಲವು ಪ್ರಶ್ನೆಗಳು ಅಧಿಕೃತ ಪ್ರಶ್ನೆಪತ್ರಿಕೆಗೆ ಹೋಲಿಕೆಯಾಗುತ್ತಿದ್ದು, ಕೆಲವು ವ್ಯಕ್ತಿಗಳ ಫೋನ್‌ಗಳಲ್ಲಿ ಈ ಮಾಹಿತಿ ಇತ್ತು ಎಂಬುದು ದೃಢಪಟ್ಟಿದೆ' ಎಂದು ಸಿಂಗ್ ವಿವರಿಸಿದ್ದಾರೆ.
'ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿತ್ತು. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಲಾಗುವುದು ಎಂದು ಸಿಂಗ್ ಭರವಸೆ ನೀಡಿದ್ದಾರೆ.

