ಕಾಸರಗೋಡು: ಜಿಲ್ಲೆಯ ಮಡಿಕೈಯಲ್ಲಿ ಡಿಫರೆಂಟ್ ಆರ್ಟ್ ಸೆಂಟರ್ ನೇತೃತ್ವದಲ್ಲಿ ಅಂಗವಿಕಲರ ಪುನಶ್ಚೇತನ, ಅಂಗವಿಕಲ ಮಕ್ಕಳಿಗೆ ತರಬೇತಿ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ನಿರ್ಮಾಣಗೊಳ್ಳಲಿರುವ ಅಂತಾರಾಷ್ಟ್ರೀಯ ವಿಕಲಚೇತನರ ಪುನರ್ವಸತಿ ಕೇಂದ್ರದ ಬಗ್ಗೆ ಜಾಗೃತಿ ಹಾಗೂ ಧನಸಂಗ್ರಹ ನಿಟ್ಟಿನಲ್ಲಿ 'ಎಂ ಕ್ಯೂಬ್'ವಿಶಿಷ್ಟ ಕಾರ್ಯಕ್ರಮ ಕಾಸರಗೋಡು ಉದಯಗಿರಿ ಸನಿಹದ ಚೆಟ್ಟುಂಗುಳಿಯ ರಾಯಲ್ ಕನ್ವೆನ್ಶನ್ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಖ್ಯಾತ ಜಾದೂಗಾರ ಗೋಪಿನಾಥ್ ಮುತ್ತುಕ್ಕಾಡ್ ನೇತೃತ್ವದಲ್ಲಿ ಮ್ಯಾಜಿಕ್ ಮತ್ತು ಸಂಗೀತ ಸಂಯೋಜಿಸಿಕೊಂಡು, ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರು ಸೇರಿದಂತೆ ಕೇರಳದ ವಿಕಲಚೇತನ ಮಕ್ಕಳನ್ನು ಸೇರಿಸಿಕೊಂಡು ನಡೆಸಿದ ಮ್ಯಾಜಿಕ್ ಹಾಗೂ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಕಣ್ಣಾಲಿ ತುಂಬಿಕೊಳ್ಳಲು ಕಾರಣವಾಯಿತು.
ಡಿಫರೆಂಟ್ ಆರ್ಟ್ ಸೆಂಟರ್ ನೇತೃತ್ವದಲ್ಲಿ ಇನ್ಸ್ಟಿಟ್ಯೂಟ್ ಫಾರ್ ಪೀಪಲ್ ವಿತ್ ಡಿಸೇಬಿಲಿಟೀಸ್ (ಐಐಪಿಡಿ) ಹಾಗೂ ಗೋಪಿನಾಥ್ ಮುತ್ತುಕ್ಕಾಡ್ ತಂಡ ಸುಮಾರು ಮೂರು ತಾಸುಗಳ ಕಾಳ ನಡೆಸಿಕೊಟ್ಟ ಮ್ಯೂಸಿಕ್ ಮತ್ತು ಸಂಗೀತ ಕಾರ್ಯಕ್ರಮಕ್ಕೆ ಧಾರ್ಮಿಕ ಮುಖಂಡ ಮುನವರಲಿ ಶಿಹಾಬ್ ತಙಳ್, ಶಾಸಕ ಸಿ.ಎಚ್ ಕುಞಂಬು, ಮಾಜಿ ಫುಟ್ಬಾಲ್ ತಾರೆ ಐ.ಎಂ ವಿಜಯನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಕಾರ್ಯಕ್ರಮದ ಸಂವಹನಕಾರರಾಗಿ ಸಹಕರಿಸಿದರು.
ಗೋಪಿನಾಥ್ ಮುತ್ತುಕ್ಕಾಡ್ ತಂಡದ ಅದ್ಭುತ ಮ್ಯಾಜಿಕ್‍ಶೋಗೆ ಹಿನ್ನೆಲೆ ಗಾಯಕರಾದ ಆರ್. ರವಿಶಂಕರ್, ಚಿತ್ರಾ ಅರುಣನ್, ಪಿಟೀಲು ವಾದಕ ವಿಷ್ಣು ಅಶೋಕ್ ಜತೆಯಾಗಿದ್ದರು.
ಕಾಸರಗೋಡಿನ ಮಡಿಕೈನಲ್ಲಿ ಡಿಫರೆಂಟ್ ಆರ್ಟ್ ಸೆಂಟರ್ ನೇತೃತ್ವದ ಐಐಪಿಡಿ ಮೂಲಕ ವಿಕಲಚೇತನ ಮಕ್ಕಳಿಗೆ ತರಬೇತಿ ನೀಡುವ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ 120 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕೇಂದ್ರ ತಲೆಯೆತ್ತಲಿದೆ. 'ಎಂ-ಕ್ಯೂಬ್'ಕಾರ್ಯಕ್ರಮದ ಮೂಲಕ ಈಗಾಗಲೇ ವಿಶ್ವದ 9 ದೇಶಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲಾಗಿದ್ದು, ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮ ದೇಶದ ಮೊದಲ ಕಾರ್ಯಕ್ರಮವಾಗಿತ್ತು.



