ರಾಯ್‌ಬರೇಲಿ: 'ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಧ್ವನಿಯನ್ನು ಪ್ರತಿನಿಧಿಸುತ್ತಿರುವ ದೇಶದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸ್ವಕ್ಷೇತ್ರ ರಾಯ್‌ಬರೇಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಸಂವಿಧಾನದ ರಕ್ಷಣೆಗಾಗಿ ಹೋರಾಡಬೇಕು' ಎಂದು ಕರೆ ನೀಡಿದ್ದಾರೆ.
'ದೇಶದ ಮಹಾನ್ ನಾಯಕರ ಸಿದ್ಧಾಂತವನ್ನು ರಕ್ಷಿಸಲಾಗುತ್ತಿಲ್ಲ. ಏಕೆಂದರೆ ನಮ್ಮ ಕಣ್ಣ ಮುಂದೆಯೇ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ' ಎಂದು ಹೇಳಿದ್ದಾರೆ.
'ಸಂವಿಧಾನವು ಸಾಮಾನ್ಯ ದಾಖಲೆಯಲ್ಲ. ಬದಲಾಗಿ ಅಂಬೇಡ್ಕರ್, ವೀರ ಪಾಸಿ ಹಾಗೂ ಮಹಾತ್ಮ ಗಾಂಧಿ ಸಿದ್ಧಾಂತವನ್ನು ಹೊಂದಿರುವ ದಾಖಲೆಯಾಗಿದೆ. ಕೇರಳದಲ್ಲಿ ನಾರಾಯಣ ಗುರು, ಕರ್ನಾಟಕದಲ್ಲಿ ಬಸವಣ್ಣ ಅವರಂತಹ ಹಲವಾರು ಸಮಾಜ ಸುಧಾಕರರ ಕೊಡುಗೆಗಳನ್ನು ಹೊಂದಿದೆ. ಬುದ್ಧ, ಗುರುನಾನಕ್, ಕಬೀರ್ ಅವರ ಧ್ವನಿಗಳು ಸಂವಿಧಾನದಲ್ಲಿ ಪ್ರತಿಫಲಿಸುತ್ತವೆ' ಎಂದು ಅವರು ಪ್ರತಿಪಾದಿಸಿದ್ದಾರೆ.
'ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ನಮಸ್ಕರಿಸುವವರು ಅಲ್ಲಿಂದ ಹೋದಾಗ ಅವರ ಸಿದ್ಧಾಂತವನ್ನೇ ಮರೆತುಬಿಡುತ್ತಾರೆ. ಅದನ್ನು ರಕ್ಷಿಸುವುದಿಲ್ಲ. ಸಿದ್ಧಾಂತವು ದಾಳಿಗೆ ಒಳಗಾದಾಗ ಅದರ ರಕ್ಷಣೆ ಮಾಡಬೇಕು' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದಾಗ ಪ್ರತಿಕ್ರಿಯಿಸಿದ ರಾಹುಲ್, 'ನೀವು ಚಪ್ಪಾಳೆ ತಟ್ಟುತ್ತೀರಿ, ಆದರೆ ಸಂವಿಧಾನದ ಪುಸ್ತಕವನ್ನು ಹರಿದು ಹಾಕಿದಾಗ ಮೌನವಾಗುತ್ತೀರಿ' ಎಂದು ಹೇಳಿದ್ದಾರೆ.
ಉಳಿತಾಯ, ಮಿತವ್ಯಯದ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
'ವಿದೇಶ ಪ್ರವಾಸ ಕೈಗೊಳ್ಳಬಾರದು ಎಂದು ಮನವಿ ಮಾಡಿದ ಕೂಡಲೇ ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಏರಿಕೆಯಾಗಲಿದೆ. ಪೆಟ್ರೋಲ್, ಡೀಸೆಲ್, ಅನಿಲ, ಆಹಾರ ಧಾನ್ಯಗಳು ಸೇರಿದಂತೆ ಎಲ್ಲದರ ಬೆಲೆ ಏರಿಕೆಯಾಗಲಿವೆ' ಎಂದು ಹೇಳಿದ್ದಾರೆ.
'ದೇಶದ ವೆಚ್ಚದಲ್ಲಿ ಅಂಬಾನಿ, ಅದಾನಿಯಂತಹ ದೊಡ್ಡ ಕೈಗಾರಿಕೋದ್ಯಮಿಗಳ ಹಿತಾಸಕ್ತಿಗೆ ಆದ್ಯತೆ ನೀಡಲಾಗುತ್ತಿದೆ' ಎಂದು ಟೀಕಿಸಿದ್ದಾರೆ.

