ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಶುಕ್ರವಾರ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.
ವಿಧಾನಸಭೆಯ ನಿಯಮಗಳ ಪ್ರಕಾರ ನಿಗದಿಪಡಿಸಲಾದ ಕಡ್ಡಾಯ 14 ದಿನಗಳ ಅವಧಿಯೊಳಗೆ ಅಧಿಕಾರಿ ಅವರು ರಾಜೀನಾಮೆಯನ್ನು ಸಭಾಪತಿ ರತೀಂದ್ರ ಬೋಸ್ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಮತ್ತು ದಕ್ಷಿಣ ಕೋಲ್ಕತ್ತದ ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.
ನಂದಿಗ್ರಾಮ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಅಭ್ಯರ್ಥಿ ಪವಿತ್ರಕರ್ ವಿರುದ್ಧ 9,665 ಮತಗಳ ಅಂತರದಿಂದ ಅಧಿಕಾರಿ ಗೆಲುವು ಸಾಧಿಸಿದ್ದರು.
ಭವಾನಿಪುರ ಕ್ಷೇತ್ರದಲ್ಲಿ ಟಿಎಂಸಿ ಮುಖ್ಯಸ್ಥೆ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ 15,105 ಮತಗಳ ಅಂತರದಿಂದ ಅಧಿಕಾರಿ ಗೆಲುವಿನ ನಗೆ ಬೀರಿದ್ದರು.
ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು 294 ಸ್ಥಾನಗಳಲ್ಲಿ ಬಿಜೆಪಿಯು 207 ಸ್ಥಾನಗಳನ್ನು ಗೆದ್ದಿದ್ದು, 15 ವರ್ಷಗಳ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಡಳಿತವನ್ನು ಬದಿಗೆ ಸರಿಸಿ, ಮೊದಲ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ.

