ಮೆಟಾ ಕಂಪನಿಯು 'ಫೋರಂ' ಎನ್ನುವ ಹೊಸ ಅಪ್ಲಿಕೇಶನ್ ಪರಿಚಯಿಸುತ್ತಿದೆ. ಫೇಸ್ಬುಕ್ ಗ್ರೂಪ್ ಗಳ ಸುತ್ತ ನಿರ್ಮಿಸಲಾದ 'ಫೋರಂ' ಅವುಗಳಿಗೆ ಸಂಬಂಧವಿಲ್ಲದ ಪ್ರತ್ಯೇಕವಾದ Reddit ನಂತಹ ಅನುಭವ ಕೊಡುವ ಅಂತರ್ನಿರ್ಮಿತ AI ಫೀಚರ್ ಗಳನ್ನು ಒಳಗೊಂಡಿರುವ ಅಪ್ಲಿಕೇಶನ್ ಆಗಿದೆ.
'ಫೋರಂ' ಅನ್ನು ಭಿನ್ನ ಶೈಲಿಯ ಸಾಮಾಜಿಕ ಮಾಧ್ಯಮವಾಗಿ ತರಲಾಗುತ್ತಿದೆ. ಮೆಟಾ ತನ್ನ ಅಪ್ಲಿಕೇಶನ್ ವಿವರಗಳಲ್ಲಿ ಬರೆದಿರುವಂತೆ "ಗಹನ ಚರ್ಚೆಗಳು, ನೈಜ ಉತ್ತರಗಳು ಮತ್ತು ನೀವು ಕಾಳಜಿವಹಿಸುವ ಸಮುದಾಯಗಳಿಗಾಗಿ ನಿರ್ಮಿಸಲಾದ ಮತ್ತು ಮೀಸಲಾದ ಸ್ಥಳವಾಗಿದೆ." ಪ್ರಸ್ತುತ ಈ ಅಪ್ಲಿಕೇಶನ್ ಅಮೆರಿಕದಲ್ಲಿ iOS ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಭಾರತದಂತಹ ಇತರ ಮಾರುಕಟ್ಟೆಯಲ್ಲಿ ಪ್ರಸ್ತುತ 'ಫೋರಂ' ಡೌನ್ಲೋಡ್ ಮಾಡಲು ಲಭ್ಯವಿರುವುದಿಲ್ಲ.
ಮೆಟಾ ತನ್ನ ಹೊಸ ಅಪ್ಲಿಕೇಶನ್ ಅನ್ನು ಔಪಚಾರಿಕವಾಗಿ ಪ್ರಾರಂಭಿಸದೆ ಇದ್ದರೂ, ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವರಾ ಅವರು ಮೊದಲಿಗೆ ಅಪ್ಲಿಕೇಶನ್ ಅನ್ನು ಗುರುತಿಸಿದ್ದಾರೆ. ಮೆಟಾ ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಇನ್ನಷ್ಟು ಅಪ್ಲಿಕೇಶನ್ಗಳನ್ನು ಬಿಡುಗಡೆ ಮಾಡಲು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ 'ಫೋರಂ' ಅನ್ನು ಪರಿಚಯಿಸಿದೆ. ಕಳೆದ ತಿಂಗಳು ಕಂಪನಿಯು 'ಇನ್ಸ್ಟಂಟ್ಸ್' ಎಂಬ ಫೀಚರ್ ಪರಿಚಯಿಸಿತ್ತು. ಬಳಕೆದಾರರು ತಕ್ಷಣಕ್ಕೆ ಮಾತ್ರ ನೋಡಲು ಸಿಗುವ ಫೋಟೋಗಳನ್ನು ಸ್ನೇಹಿತರೊಂದಿಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲು ಈ ಫೀಚರ್ ಅನುವು ಮಾಡಿಕೊಡುತ್ತದೆ.
"ಸಾರ್ವಜನಿಕವಾಗಿ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಂಡುಕೊಳ್ಳಲು ನಾವು ಬಹಳಷ್ಟು ಉತ್ಪನ್ನಗಳನ್ನು ಪರಿಚಯಿಸುತ್ತಾ ಇರುತ್ತೇವೆ" ಎಂದು 'ಫೋರಂ' ಕುರಿತಾಗಿ ಮೆಟಾ ಸಂವಹನ ಮ್ಯಾನೇಜರ್ ಫೆರಿಯಲ್ ಹೆಮಂಮ್ಡಾ ಅವರು ಹೇಳಿರುವುದಾಗಿ ವರದಿಯಾಗಿದೆ.
'ಫೋರಂ' ನೋಡಲು ಹೇಗಿದೆ?
ವರದಿಯ ಪ್ರಕಾರ 'ಫೋರಂ' ಬಳಸಬೇಕೆಂದರೆ ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಯೊಂದಿಗೆ ಸೈನ್ ಇನ್ ಆಗಬೇಕಿದೆ. ಒಮ್ಮೆ ಲಾಗಿನ್ ಆದ ನಂತರ ಪೋಸ್ಟ್ಗಳು ಸ್ವಯಂಪ್ರೇರಿತವಾಗಿ ಅವರು ಬಳಸುವ ಫೇಸ್ಬುಕ್ ಗ್ರೂಪ್ಗಳಿಂದ 'ಫೋರಂ'ಗೆ ಬರುತ್ತದೆ. ಅಲ್ಲಿ ರೆಡಿಟ್ ರೀತಿಯ ಫೀಡ್ಗಳಿರುತ್ತವೆ ಮತ್ತು ಜೊತೆಗೆ ಪ್ರೊಫೈಲ್ ವಿವರಗಳು ಮತ್ತು ಚಟುವಟಿಕೆ ವಿವರಗಳು ಇರುತ್ತವೆ.
'ಫೋರಂ' ನಲ್ಲಿ ಬಳಕೆದಾರರು ಅಡ್ಡ ಹೆಸರಿನಲ್ಲೂ ಫೋಸ್ಟ್ ಮಾಡಬಹುದು. ಆದರೆ ಅಡ್ಡಹೆಸರು ಫೇಸ್ಬುಕ್ ಅಪ್ಲಿಕೇಶನ್ ನಲ್ಲಿ ಬಳಕೆಯಾಗುವಂತೆಯೇ ಇರಬೇಕು. 'ಫೋರಂ'ನಲ್ಲಿ ಹಂಚಿಕೊಳ್ಳಲಾದ ಎಲ್ಲವೂ ಫೇಸ್ಬುಕ್ನಲ್ಲೂ ಬಳಕೆದಾರರ ಗ್ರೂಪ್ಗಳಲ್ಲಿ ಲಭ್ಯವಿರುತ್ತವೆ. ಬಳಕೆದಾರರು ನಿರ್ದಿಷ್ಟ ಗ್ರೂಪ್ಗಳಿಗೆ ನೇರವಾಗಿ ಪೋಸ್ಟ್ ಮಾಡಬಹುದು ಮತ್ತು ಹೊಸ ಗ್ರೂಪ್ಗಳನ್ನು ಬ್ರೌಸ್ ಮಾಡಬಹುದು.
ಮೆಟಾ ಹೇಳಿರುವ ಪ್ರಕಾರ ಫೋರಂನ ಫೀಡ್ಗಳು ಗುಂಪುಗಳೊಳಗಿನ ಸಂಭಾಷಣೆಗಳ ಮೇಲೆ ಕೇಂದ್ರೀಕೃತವಾಗಿವೆ. ಬಳಕೆದಾರರು "ಕೇವಲ ಟ್ರೆಂಡಿಂಗ್ ವಿಷಯಗಳನ್ನು ಮಾತ್ರವಲ್ಲದೆ, ಜನರು ನಿಜವಾಗಿಯೂ ಏನು ಹೇಳುತ್ತಿದ್ದಾರೆ ಎನ್ನುವುದನ್ನು ನೋಡಬಹುದು. ಮುಖ್ಯ ಫೀಡ್ ಜೊತೆಗೆ ಬಳಕೆದಾರರು ತಮ್ಮ ಗ್ರೂಪ್ ಪೋಸ್ಟ್ಗಳನ್ನು ತೋರಿಸುವ ತಮ್ಮ ಫೇಸ್ಬುಕ್ ಪ್ರೊಫೈಲ್ನ ಮಿನಿ ಆವೃತ್ತಿಯನ್ನು ಕೂಡ ನೋಡಬಹುದು."
ಫೋರಂನಲ್ಲಿರುವ AI ಫೀಚರ್ ಗಳೇನು?:
'ಫೋರಂ' ಅಪ್ಲಿಕೇಶನ್ ನಲ್ಲಿ AI ಚಾಲಿತ "Ask" ಎನ್ನುವ ಟ್ಯಾಬ್ ಇರುತ್ತದೆ. ಇಲ್ಲಿ ಬಳಕೆದಾರರು ಪ್ರಶ್ನೆಗಳನ್ನು ಕೇಳಬಹುದು ಮತ್ತು ಉತ್ತರಗಳನ್ನು ಪಡೆಯಬಹುದು. ಉತ್ತರಗಳು ವಿಭಿನ್ನ ಗುಂಪುಗಳ ಚರ್ಚೆಯಿಂದ ಸಂಕ್ಷಿಪ್ತಗೊಳಿಸಿ ಬರುತ್ತವೆ.
AI ಚಾಲಿತ ಪ್ರತಿಕ್ರಿಯೆಯ ಜೊತೆಗೆ ಉಲ್ಲೇಖಿಸಲಾದ ಮೂಲ ಪೋಸ್ಟ್ ಗಳ ಫಲಿತಾಂಶಗಳೂ ಇರುತ್ತವೆ. ಹೀಗಾಗಿ ಬಳಕೆದಾರರು ಟ್ಯಾಪ್ ಮಾಡಿ ಆ ಪೋಸ್ಟ್ಗಳ ಪೂರ್ಣ ಸಂಭಾಷಣೆಯನ್ನು ನೋಡಬಹುದಾಗಿದೆ. ಅಲ್ಲದೆ ಹೊಸ ಫೇಸ್ಬುಕ್ ಗ್ರೂಪ್ಗಳಿಗೆ ಸೇರಲು ಸಲಹೆಗಳನ್ನೂ ತೋರಿಸುತ್ತದೆ. ಗುಂಪುಗಳನ್ನು ನಿರ್ವಹಿಸಲು ಮತ್ತು ವಿಷಯಗಳನ್ನು ಮಾಡರೇಟ್ ಮಾಡಲು ಗುಂಪು ನಿರ್ವಾಹಕರು AI ಸಹಾಯಕವನ್ನು ಸಹ ಬಳಸಿಕೊಳ್ಳಬಹುದು.

