ಜೈಪುರ: ನೀಟ್ (NEET-UG 2026) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ 'ಆಕಸ್ಮಿಕ'ವಾಗಿ ಬೆಳಕಿಗೆ ಬಂದಿರುವ ರೀತಿ ಇದೀಗ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನದ ಸಿಕಾರ್ ನಲ್ಲಿ ಕೋಚಿಂಗ್ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಡೆಸುತ್ತಿರುವ ವ್ಯಕ್ತಿಗೆ ವಾಟ್ಸಾಪ್ ಮೂಲಕ ಬಂದಿದ್ದ 'ಸಂಭಾವ್ಯ ಪ್ರಶ್ನೆಗಳ ಪತ್ರಿಕೆ' ತನಿಖೆಗೆ ಮಹತ್ವದ ಸುಳಿವಾಗಿದ್ದು, ಪ್ರಕರಣ ಈಗ ಹಲವು ರಾಜ್ಯಗಳಿಗೆ ವಿಸ್ತರಿಸಿದೆ.
ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಕೈಗೆತ್ತಿಕೊಂಡಿದೆ.
ಮೇ 2ರಂದು ರಾತ್ರಿ 11 ಗಂಟೆ ಸುಮಾರಿಗೆ ಕೇರಳದಲ್ಲಿ MBBS ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ವಾಟ್ಸಾಪ್ ಮೂಲಕ 'ಸಂಭಾವ್ಯ ಪ್ರಶ್ನೆಗಳ ಪತ್ರಿಕೆ' ಕಳುಹಿಸಿದ್ದ ಎಂದು ವಿಶೇಷ ಕಾರ್ಯಾಚರಣೆ ಗುಂಪು (SOG) ಮೂಲಗಳು ತಿಳಿಸಿವೆ. ಸಿಕಾರ್ ನಲ್ಲಿರುವ ಸ್ನೇಹಿತನೊಬ್ಬ ಈ ಪಿಡಿಎಫ್ ಕಳುಹಿಸಿದ್ದಾನೆ ಎನ್ನಲಾಗಿದೆ.
ಈ ವಿದ್ಯಾರ್ಥಿ ಈಗಾಗಲೇ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಕಾರಣ ಪತ್ರಿಕೆಯ ಅಗತ್ಯ ಅವನಿಗಿರಲಿಲ್ಲ. ಆದರೆ, ತನ್ನ ತಂದೆ ನಡೆಸುತ್ತಿದ್ದ ಹಾಸ್ಟೆಲ್‌ನಲ್ಲಿ NEET ಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗಬಹುದು ಎಂಬ ಕಾರಣಕ್ಕೆ ಪತ್ರಿಕೆಯನ್ನು ಕಳುಹಿಸಿದ್ದ ಎಂದು ಮೂಲಗಳು ಹೇಳಿವೆ.
ಮರುದಿನ ಬೆಳಿಗ್ಗೆ ಹಾಸ್ಟೆಲ್ ಮಾಲೀಕರು ಪರೀಕ್ಷೆ ಬರೆಯಲು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ ಪತ್ರಿಕೆ ನೀಡಲು ಯತ್ನಿಸಿದಾಗ ಅವರು ಆಗಲೇ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದರು. ಬಳಿಕ ಕುತೂಹಲದಿಂದ ಅವರು ಪರಿಚಯದ ರಸಾಯನಶಾಸ್ತ್ರ ಶಿಕ್ಷಕರಿಗೆ ಪತ್ರಿಕೆ ಹಂಚಿಕೊಂಡರು.
ಪರೀಕ್ಷೆ ಬಳಿಕ ಶಿಕ್ಷಕರು 'ಸಂಭಾವ್ಯ ಪ್ರಶ್ನೆಗಳ ಪತ್ರಿಕೆ'ಯನ್ನು ಮೂಲ ಪ್ರಶ್ನೆಪತ್ರಿಕೆಗೆ ಹೋಲಿಕೆ ಮಾಡಿದಾಗ 108 ಪ್ರಶ್ನೆಗಳಲ್ಲಿ 45 ಪ್ರಶ್ನೆಗಳು ಅಕ್ಷರಶಃ ಹೊಂದಿಕೆಯಾಗಿದ್ದವು ಎಂದು ತಿಳಿದುಬಂತು. ಬಳಿಕ ಜೀವಶಾಸ್ತ್ರ ಶಿಕ್ಷಕರೊಬ್ಬರನ್ನು ಸಂಪರ್ಕಿಸಿದಾಗ 204 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹೊಂದಿಕೆಯಾಗಿದ್ದವು ಎಂಬುದು ಪತ್ತೆಯಾಯಿತು.
ಒಟ್ಟಾರೆ 135 ಪ್ರಶ್ನೆಗಳು ಮೂಲ ಪ್ರಶ್ನೆಗಳಿಗೆ ಹೊಂದಿಕೆಯಾಗಿದ್ದರಿಂದ ಹಾಸ್ಟೆಲ್ ಮಾಲೀಕರು ಮತ್ತು ಶಿಕ್ಷಕರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರು. ಆದರೆ, ಪರೀಕ್ಷೆ ಮುಗಿದ ಬಳಿಕ ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಲು ಸಿಕಾರ್ ಪೊಲೀಸರು ನಿರಾಕರಿಸಿದರು ಎಂದು ಎಸ್‌ಒಜಿ ಮೂಲಗಳು ತಿಳಿಸಿವೆ. ಪರೀಕ್ಷೆ ರದ್ದುಗೊಳಿಸುವ ಉದ್ದೇಶದಿಂದಲೇ ದೂರು ನೀಡಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 'ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೆ ಪರೀಕ್ಷೆಗೆ ಮುನ್ನವೇ ದೂರು ನೀಡಬೇಕಿತ್ತು' ಎಂದು ಪೊಲೀಸರು ಹೇಳಿದ್ದರು ಎನ್ನಲಾಗಿದೆ.
ಆದರೂ ವಿಷಯವನ್ನು ಅಲ್ಲಿಗೆ ಬಿಡದ ಹಾಸ್ಟೆಲ್ ಮಾಲೀಕರು ಹಾಗೂ ಶಿಕ್ಷಕರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NET)ಗೆ ಇಮೇಲ್ ಕಳುಹಿಸಿದರು. ಪರೀಕ್ಷೆ ನಡೆದ ನಾಲ್ಕು ದಿನಗಳ ಬಳಿಕ NET ಗುಪ್ತಚರ ಇಲಾಖೆಗೆ ಪತ್ರ ಬರೆದು, ಮೇ 8ರಂದು ರಾಜಸ್ಥಾನ SOGಗೆ ತನಿಖೆ ವಹಿಸಿತು.
ಹಾಸ್ಟೆಲ್ ಮಾಲೀಕರ ಮೊಬೈಲ್ ಹಾಗೂ ವಾಟ್ಸಾಪ್ ವಿವರಗಳನ್ನು ಪರಿಶೀಲಿಸಿದ ಬಳಿಕ ಘಟನೆಗಳ ಸರಣಿ ದೃಢಪಟ್ಟಿದೆ ಎಂದು ಎಸ್‌ಒಜಿ ಮೂಲಗಳು ತಿಳಿಸಿವೆ. ಪ್ರಕರಣವನ್ನು ಆಕಸ್ಮಿಕವಾಗಿ ಬಹಿರಂಗಪಡಿಸಿದ್ದ ಹಾಸ್ಟೆಲ್ ಮಾಲೀಕರು, ಅವರ ಪುತ್ರ ಹಾಗೂ ರಸಾಯನಶಾಸ್ತ್ರ ಶಿಕ್ಷಕರ ಗುರುತುಗಳನ್ನು ಭದ್ರತಾ ಕಾರಣಗಳಿಂದ ಬಹಿರಂಗಪಡಿಸದಿರಲು ಎಸ್‌ಒಜಿ ನಿರ್ಧರಿಸಿದೆ.
ತನಿಖೆ ಮುಂದುವರಿದಂತೆ ಸಿಕಾರ್‌ನಲ್ಲಿ ಪ್ರಶ್ನೆಪತ್ರಿಕೆ ವ್ಯಾಪಕವಾಗಿ ವೈರಲ್ ಆಗಿರುಲ ಸುಳಿವುಗಳು ದೊರೆತಿವೆ. ಇದೇ ವೇಳೆ ಜೈಪುರ ಹೊರವಲಯದ ಜಾಮ್‌ವರಂಗಢದಲ್ಲಿ ಇಬ್ಬರು ಸಹೋದರರು ಸಿಕಾರ್‌ನ ವ್ಯಕ್ತಿಯೊಬ್ಬರಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಚಾರಣೆಯ ವೇಳೆ ಅವರು ಹರಿಯಾಣದಲ್ಲಿರುವ ಮತ್ತೊಬ್ಬ ವ್ಯಕ್ತಿಯ ಹೆಸರು ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹರಿಯಾಣದ ಈ ವ್ಯಕ್ತಿ ಆಯುರ್ವೇದ ವೈದ್ಯಕೀಯದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಬಿಹಾರ, ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ NEET ಅಭ್ಯರ್ಥಿಗಳಿಗೆ ಭಾರಿ ಮೊತ್ತಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತನಿಖೆ ನಂತರ ಮಹಾರಾಷ್ಟ್ರದ ನಾಸಿಕ್‌ಗೆ ತಲುಪಿದ್ದು, ನಾಸಿಕ್‌ನ ವಿದ್ಯಾರ್ಥಿ ಶುಭಂ ಖೈರ್ನರ್ ನಿಂದಲೇ ಆಯುರ್ವೇದ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ದೊರೆತಿದೆ ಎಂದು ವರದಿಯಾಗಿದೆ. ಆತನ ಬಳಿ 'ಸಂಭಾವ್ಯ ಪ್ರಶ್ನೆಗಳ ಪತ್ರಿಕೆ'ಯ ಮುದ್ರಿತ ಪ್ರತಿಯೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆ ಮಂಗಳವಾರ NEET UG 2026 ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ. ಪರಿಷ್ಕೃತ ದಿನಾಂಕದಲ್ಲಿ ಮರುಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿರುವ ಎನ್‌ಟಿಎ, ಅಭ್ಯರ್ಥಿಗಳು ಮರು ನೋಂದಣಿ ಮಾಡಿಕೊಳ್ಳುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಸಲ್ಲಿಸಲಾದ ಅರ್ಜಿಗಳು ಮಾನ್ಯವಾಗಿರುತ್ತವೆ ಎಂದು ತಿಳಿಸಿದೆ.

