ತಾನು ಹೊಂದಿರುವ ಭಾರತೀಯ ಮೂಲದ ವ್ಯಕ್ತಿ (PIO) ಕಾರ್ಡ್ ಅನ್ನು ಸಾಗರೋತ್ತರ ಭಾರತೀಯ (OCI) ಕಾರ್ಡ್ ಆಗಿ ಬದಲಾಯಿಸಬೇಕೆಂದು ಕೋರಿ ಸಿದ್ಧಾರ್ಥ ವರದರಾಜನ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ವರದರಾಜನ್ ಹೈಕೋರ್ಟ್ ಮೆಟ್ಟಲೇರಿದ್ದರು.
ಮಂಗಳವಾರ ಅರ್ಜಿಯ ಆಲಿಕೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು, OCI ಕಾರ್ಡ್ ಗಾಗಿ ವರದರಾಜನ್ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣಗಳನ್ನು ನೀಡದೆ ತಿರಸ್ಕರಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ವಕೀಲರು, ಈ ಬಗ್ಗೆ ಕಾರಣಗಳನ್ನು ವಿವರಿಸುವಂತೆ ಸಂಬಂಧಪಟ್ಟ ಇಲಾಖೆಗಳನ್ನು ಕೋರುವುದಾಗಿ ತಿಳಿಸಿದರು.
ಆದರೂ, ಈ ಆದೇಶವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಪುನರುಚ್ಚರಿಸಿದರು.
ವರದರಾಜನ್ ಅವರನ್ನು ಪ್ರತಿನಿಧಿಸಿದ ವಕೀಲರು ವಾದ ಮಂಡಿಸುತ್ತಾ, ತನ್ನ ಕಕ್ಷಿದಾರನ ಭಾರತೀಯ ಮೂಲದ ವ್ಯಕ್ತಿ ಕಾರ್ಡ್ 2032ರವರೆಗೆ ಸಿಂಧುವಾಗಿದೆ. ಆದರೂ, ಆ ಯೋಜನೆ ಈಗ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಅದು ಉಪಯುಕ್ತವಾಗಿಲ್ಲ ಎಂದರು.
ಭಾರತೀಯ ಮೂಲದ ವ್ಯಕ್ತಿ ಕಾರ್ಡ್ ಹೊಂದಿರುವವರನ್ನು ಸಾಗರೋತ್ತರ ಭಾರತೀಯ ಪ್ರಜೆಗಳು ಎಂದು ಪರಿಗಣಿಸಲಾಗುತ್ತದೆಯಾದರೂ, ವರದರಾಜನ್ ಅವರು ಭೌತಿಕ OCI ಕಾರ್ಡ್ ನೀಡುವಂತೆ ಕೋರಿದ್ದರು. ಆದರೆ ಅವರ ಮನವಿಯನ್ನು ಎಪ್ರಿಲ್ 2ರಂದು ಕೇಂದ್ರ ಸರ್ಕಾರ ನಿರಾಕರಿಸಿತ್ತು.
ಭಾರತೀಯ ಮೂಲದ ವಿದೇಶಿ ಪ್ರಜೆಗಳು ಭಾರತದಲ್ಲಿ ಅನಿರ್ದಿಷ್ಟಾವಧಿಗೆ ಉಳಿದುಕೊಳ್ಳುವುದಕ್ಕೆ ಹಾಗೂ ಕೆಲಸ ಮಾಡುವುದಕ್ಕೆ ಸಾಗರೋತ್ತರ ಭಾರತೀಯ (OCI) ಕಾರ್ಡ್ ಅವಕಾಶ ನೀಡುತ್ತದೆ. ಅಮೆರಿಕ ಪ್ರಜೆಯಾದ ಸಿದ್ಧಾರ್ಥ ವರದರಾಜನ್ ಅವರು ಭಾರತೀಯ ಮೂಲದ ವ್ಯಕ್ತಿ (PIO) ಕಾರ್ಡ್ ಹೊಂದಿದ್ದಾರೆ. ಎಲ್ಲಾ PIO ಕಾರ್ಡ್ ಗಳನ್ನು ಡಿಸೆಂಬರ್ 31ರಿಂದ ಅಮಾನ್ಯಗೊಳಿಸಲಾಗಿತ್ತು.

