ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂಭತ್ತು ವರ್ಷಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆಗಳು ನಾಲ್ಕು ಬಾರಿ ಸೋರಿಕೆಯಾಗಿವೆ, ಆದರೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಎಂದು ಹೇಳಿದರು.
''ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅದರ ಪರಿಣಾಮವಾಗಿ ನಡೆದ ಪರೀಕ್ಷಾ ರದ್ದತಿಯಿಂದ ನೊಂದಿರುವ ವಿದ್ಯಾರ್ಥಿಗಳಿಗೆ ನನ್ನ ಸಹಾನುಭೂತಿಯಿದೆ. ಇಂಥ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ನನಗೆ ಗೊತ್ತು. ಕೋಚಿಂಗ್ ದುಬಾರಿಯಾಗಿದೆ. ಮಕ್ಕಳಿಗೆ ಕೋಚಿಂಗ್ ವ್ಯವಸ್ಥೆ ಮಾಡುವುದಕ್ಕಾಗಿ ಹಲವು ಕುಟುಂಬಗಳು ತಮ್ಮ ಆಭರಣವನ್ನು ಅಡವಿಡುತ್ತವೆ'' ಎಂದು ಅವರು ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳಿಗೆ ಮಾಡಿರುವ ''ಅತ್ಯಂತ ದೊಡ್ಡ ದ್ರೋಹ''ವಾಗಿದೆ ಎಂದು ದಿಲ್ಲಿ ಮಾಜಿ ಮುಖ್ಯಮಂತ್ರಿ ಬಣ್ಣಿಸಿದರು. ''ಒಂದು ಪ್ರಶ್ನೆಪತ್ರಿಕೆ ಸೋರಿಕೆಯನ್ನೇ ತಡೆಯಲಾಗದವರು ಸರಕಾರವನ್ನು ಹೇಗೆ ನಡೆಸುತ್ತಾರೆ. ಇದು ಸಂಪೂರ್ಣ ಶಾಮೀಲಾತಿಯಿಂದ ನಡೆದ ಕೃತ್ಯವಾಗಿದೆ'' ಎಂದು ಅವರು ಆರೋಪಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆಯು ಶೂನ್ಯದಿಂದ ನಡೆದಿಲ್ಲ ಎಂದು ಹೇಳಿದ ಅವರು, ಇದರಲ್ಲಿ ಮೇಲಿನವರ ಕೈವಾಡವಿದೆ ಎಂದು ಆರೋಪಿಸಿದರು. ಸರಕಾರವು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಆಕ್ರೋಶವನ್ನು ಅವರು ವ್ಯಕ್ತಪಡಿಸಿದರು.
''ವಿದ್ಯಾರ್ಥಿಗಳು ಬೀದಿಗಿಳಿಯಬೇಕು ಎಂಬುದಾಗಿ ನಾನು ಅವರಿಗೆ ಹೇಳಬಯಸುತ್ತೇನೆ. ಈ ಸರಕಾರವು ಬೀದಿ ಪ್ರತಿಭಟನೆಯ ಭಾಷೆಯನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ, ಕೇಜ್ರಿವಾಲ್ ನಿಮ್ಮೊಂದಿಗಿದ್ದಾರೆ'' ಎಂದು ಆಪ್ ಮುಖ್ಯಸ್ಥ ಹೇಳಿದರು.

