ವಾರಾಣಸಿ: ಕೇಂದ್ರ ಸರ್ಕಾರವು ಗೋವನ್ನು 'ರಾಷ್ಟ್ರಮಾತೆ' ಎಂದು ಘೋಷಿಸಬೇಕು ಮತ್ತು ಅದರ ರಕ್ಷಣೆಯನ್ನು ಖಚಿತಪಡಿಸಬೇಕು ಎಂದು ಅಭಿಯಾನ ಆರಂಭಿಸಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಇದೀಗ ಹೊಸ ಹೆಜ್ಜೆ ಇರಿಸಿದ್ದಾರೆ.
ಜನಪ್ರಿಯ ಒಎಲ್‌ಎಕ್ಸ್ ಆನ್‌ಲೈನ್ ಮಾರಾಟ ತಾಣದ ರೀತಿ ಗೋ ಎಲ್‌ಎಕ್ಸ್ ಎಂಬ ವೆಬ್‌ಸೈಟ್ ಆರಂಭಿಸುವುದಾಗಿ ಘೋಷಿಸಿದ್ದಾರೆ.
ವಾರಾಣಸಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವುಗಳನ್ನು ಕಸಾಯಿಖಾನೆಗಳಿಗೆ ಕಳಿಸುವುದನ್ನು ತಡೆಯಲು ನಾವು ಗೋ ಎಲ್‌ಎಕ್ಸ್ ವೆಬ್‌ಸೈಟ್ ಆರಂಭಿಸುತ್ತಿದ್ದೇವೆ. ಇದು ಒಎಲ್‌ಎಕ್ಸ್ ರೀತಿ ಕೆಲಸ ಮಾಡಲಿದೆ. ಗೋವುಗಳನ್ನು ಮಾರುವವರು-ಕೊಳ್ಳುವ ಹಿಂದೂಗಳ ನಡುವೆ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದ ಕಸಾಯಿಖಾನೆಗೆ ಗೋವುಗಳು ಹೋಗದಂತೆ ತಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುವುದನ್ನು ತಡೆದರೆ ಹಿಂದೂಗಳಿಗೆ ನಷ್ಟವಾಗುತ್ತದೆ ಎನ್ನುವುದು ಆಧಾರರಹಿತ. ನಿಜವಾದ ಹಿಂದೂಗಳು ಗೋವುಗಳನ್ನು ಕಸಾಯಿಖಾನೆಗೆ ಕಳಿಸುವುದಿಲ್ಲ ಎಂದು ಹೇಳಿದರು.
ನಾವೊಬ್ಬರೆ ಗೋ ಎಲ್‌ಎಕ್ಸ್ ಆರಂಭಿಸುತ್ತಿಲ್ಲ. ಗೋ ರಕ್ಷಣೆಗೆ ದೇಶದಾದ್ಯಂತ ತೊಡಗಿಸಿಕೊಂಡಿರುವವರು ಇದರ ಹಿಂದೆ ಕೆಲಸ ಮಾಡಲಿದ್ದಾರೆ. ಗೋವಿನ ರಕ್ಷಣೆಗಾಗಿ ಈ ಅಭಿಯಾನವು ಅತ್ಯುತ್ತಮವಾಗಿದೆ ಎಂದು ವಿವರಿಸಿದರು.

