ಚುನಾವಣಾ ಆಯೋಗ ನಡೆಸುತ್ತಿರುವ SIR ಪ್ರಕ್ರಿಯೆಯು 'ಹಿಂಬಾಗಿಲಿನ ಪೌರತ್ವ ಪರಿಶೀಲನೆ' ಎಂದು ಅರ್ಜಿದಾರರು ಹಾಗೂ ವಿರೋಧ ಪಕ್ಷಗಳು ವಾದಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ಅಭಿಪ್ರಾಯ ಮಹತ್ವ ಪಡೆದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು SIR ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಎತ್ತಿಹಿಡಿಯುವ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಭಾರತ ಚುನಾವಣಾ ಆಯೋಗಕ್ಕೆ (ECI) ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಯೋಗವು ವ್ಯಕ್ತಿಯ ಪೌರತ್ವ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬಹುದು. ಆದರೆ ಅದು ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕೇ ಅಥವಾ ಹೊರಗಿಡಬೇಕೇ ಎಂಬ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿತು.
'ಆಯೋಗವು ಮತದಾರರ ಪಟ್ಟಿಯಿಂದ ಹೆಸರು ಅಳಿಸಬಹುದು. ಆದರೆ ಅದರಿಂದ ಆ ವ್ಯಕ್ತಿ ಭಾರತದ ಪ್ರಜೆಯಲ್ಲ ಎಂಬ ಅರ್ಥ ಬರುವುದಿಲ್ಲ. ಪೌರತ್ವ ನಿರ್ಧಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿತು.
ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಚುನಾವಣಾ ಆಯೋಗವು ಪರೋಕ್ಷವಾಗಿ ಪೌರತ್ವ ಪರಿಶೀಲನೆ ನಡೆಸುತ್ತಿದೆ ಎಂದು ಅರ್ಜಿದಾರರು ಮತ್ತು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಮತದಾರರ ಪಟ್ಟಿಯ ನಿರ್ವಹಣೆ ಹಾಗೂ ಪೌರತ್ವ ನಿರ್ಧಾರ ಎರಡು ಪ್ರತ್ಯೇಕ ವಿಚಾರಗಳಾಗಿವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

