ನವದೆಹಲಿ: 'ಇದೇ ಜುಲೈ 1ರಿಂದ 'ವಿಜಿ ಜಿ ರಾಮ್ ಜಿ' ಜಾರಿಯಾಗಲಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು 100 ಅಧಿಕಾರಿಗಳನ್ನು ನಿಯೋಜಿಸಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಯೋಜನೆಯ ಜಾರಿ ಹಂತದಲ್ಲಿ ಈ ಅಧಿಕಾರಿಗಳು ಸಹಾಯಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಜವಾಬ್ದಾರಿ ನಿರ್ವಹಿಸಲಿದ್ದು, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಫೀಲ್ಡ್ ಹಂತದ ಸಿಬ್ಬಂದಿಗೆ ಅಗತ್ಯ ನೆರವು ನೀಡಲಿದ್ದಾರೆ. ಕಾರ್ಯಾಚರಣೆ ಹಂತದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪೂರಕ ಮಾರ್ಗದರ್ಶನ ಮಾಡಲಿದ್ದಾರೆ.
ಹೊಸ ಉದ್ಯೋಗ ಖಾತರಿ ಯೋಜನೆಯ ಜಾರಿ ನಿಟ್ಟಿನಲ್ಲಿ ಇಲಾಖೆಯು ಈ ಕ್ರಮ ಕೈಗೊಂಡಿದೆ. 2026-27ರಲ್ಲಿ ಇಲಾಖೆಯು ಮಧ್ಯಂತರ ಅನುದಾನವಾಗಿ ಕೇಂದ್ರದ ಪಾಲು ₹95,692 ಕೋಟಿ ಹಂಚಿಕೆ ಮಾಡಲಾಗಿದೆ. ದೇಶದ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಹೊಸ ಕಾಯ್ದೆ ಜಾರಿ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಈಗಾಗಲೇ ಅವಕಾಶ ನೀಡಿದೆ.
'ವಿಕಸಿತ ಭಾರತ- ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಕಾಯ್ದೆ-2025ರ (ವಿಬಿ- ಜಿ ರಾಮ್ ಜಿ) ಹೆಸರಿನಡಿಯಲ್ಲಿ ಆರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಅಧಿಸೂಚನೆ ಹೊರಡಿಸಿದೆ' ಎಂದು ಇಲಾಖೆಯು ತಿಳಿಸಿದೆ.

