ನವದೆಹಲಿ: ದೇಶದಾದ್ಯಂತ ನೂರಾರು ಜನರನ್ನು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಸೈಬರ್ ಅಪರಾಧ ಜಾಲದ ವಿರುದ್ಧ ಕೇಂದ್ರೀಯ ತನಿಖಾ ದಳ ಸಿಬಿಐ ಭಾರಿ ದಾಳಿ ನಡೆಸಿದೆ.
ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಅನ್ನೇ ಹೋಲುವ ನಕಲಿ ಯುಆರ್‌ಎಲ್ ಸೃಷ್ಟಿಸಿ ಸಾರ್ವಜನಿಕರನ್ನು ಹೆದರಿಸುತ್ತಿದ್ದ ಈ ಜಾಲವನ್ನು ಭೇದಿಸಲು ದೇಶದ 16 ರಾಜ್ಯಗಳ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುರುವಾರ (ಜೂನ್ 25) ಏಕಕಾಲಕ್ಕೆ ಶೋಧ ಕಾರ್ಯ ನಡೆಸಲಾಗಿದೆ.
ಸಿಬಿಐ ಅಧಿಕಾರಿಗಳು ಆಪರೇಷನ್ ಚಕ್ರ-ಗಿIಅಡಿಯಲ್ಲಿ 60ಕ್ಕೂ ಹೆಚ್ಚು ವಿಶೇಷ ತನಿಖಾ ತಂಡಗಳನ್ನು ರಚಿಸಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪಂಜಾಬ್ ಮತ್ತು ಗುಜರಾತ್‌ನಿಂದ ಹಿಡಿದು ಈಶಾನ್ಯದ ಅಸ್ಸಾಂ ಮತ್ತು ಮಣಿಪುರದವರೆಗೆ ಹರಡಿದ್ದ ಈ ಜಾಲವು ದೇಶಾದ್ಯಂತ ಕನಿಷ್ಠ 200ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಸಾರ್ವಜನಿಕರಿಂದ ಸುಲಿಗೆ ಮಾಡಲು ಡಿಜಿಟಲ್ ಅರೆಸ್ಟ್ ಎಂಬ ಅತ್ಯಂತ ಅಪಾಯಕಾರಿ ತಂತ್ರವನ್ನು ಬಳಸುತ್ತಿದ್ದಾರೆ. ವಂಚಕರು ತಾವೂ ಪೊಲೀಸ್ ಅಧಿಕಾರಿಗಳು, ಕೇಂದ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳು ಅಥವಾ ನ್ಯಾಯಾಂಗದ ಅಧಿಕಾರಿಗಳು ಎಂದು ಸುಳ್ಳು ಹೇಳಿ ಸಂತ್ರಸ್ತರನ್ನು ಸಂಪರ್ಕಿಸುತ್ತಾರೆ. ನೀವು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದೀರಿ ಎಂದು ಹೆದರಿಸಿ, ಬಂಧನ ಅಥವಾ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಭಾರಿ ಮೊತ್ತದ ಹಣವನ್ನು ಪಾವತಿಸುವಂತೆ ಒತ್ತಾಯಿಸುತ್ತಾರೆ.
ಈ ಇಡೀ ಹಗರಣದ ಕೇಂದ್ರಬಿಂದು ಭಾರತದ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಂತೆ ಕಾಣುವ ನಕಲಿ ಡೊಮೇನ್ ಆಗಿದೆ ಎಂದು ಸಿಬಿಐ ತಿಳಿಸಿದೆ.
'ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸಂತ್ರಸ್ತರನ್ನು ನಂಬಿಸಲು ವಂಚಕರು ಈ ನಕಲಿ ಜಾಲತಾಣವನ್ನು ಬಳಸುತ್ತಿದ್ದರು. ಈ ಕುರಿತು ಭಾರತೀಯ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯಿಂದ ಬಂದ ಅಧಿಕೃತ ದೂರಿನ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು' ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

