ಮುಂಬೈ: ಮಹಾರಾಷ್ಟ್ರದ ಹಿಂಗೊಲಿಯ 18 ವರ್ಷದ ನೀಟ್ ಆಕಾಂಕ್ಷಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ, ವಿಡಿಯೊ ರೆಕಾರ್ಡ್ ಮಾಡಿ ತಾಯಿಯ ಕ್ಷಮೆ ಕೇಳಿದ್ದಾನೆ.
'ಸಾರಿ ಮಾಮ್' ಎಂದು ವಿದ್ಯಾರ್ಥಿ ಆತ್ಮಹತ್ಯೆಗೂ ಮುನ್ನ ಮಾಡಿದ ವಿಡಿಯೊದಲ್ಲಿ ಹೇಳಿದ್ದಾನೆ.
ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿಯನ್ನು ಸುಶಿಲ್ ಢಾಗೆ ಎಂದು ಗುರುತಿಸಲಾಗಿದ್ದು, ಜೂನ್ 21ರಂದು ನಡೆದ ಮರುಪರೀಕ್ಷೆಗೆ ಹಾಜರಾಗಿದ್ದರು.
'ಅಮ್ಮ, ನಾನು ಇಂದು ನನ್ನ ಜೀವನದ ಜೊತೆ ಮಾತನಾಡಲು ತೆರಳುತ್ತಿದ್ದೇನೆ. ಅಮ್ಮ, ದಯವಿಟ್ಟು ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನನ್ನ ಮುಂದಿನ ಜನ್ಮದಲ್ಲೂ ನಿಮ್ಮ ಹೊಟ್ಟೆಯಲ್ಲೇ ಹುಟ್ಟಿ ಬರುತ್ತೇನೆ. ಈ ರೀತಿಯ ನೋವನ್ನು ಮತ್ತೆ ನಿಮಗೆ ನೀಡುವುದಿಲ್ಲ' ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾನೆ.
'ದಯವಿಟ್ಟು ನನ್ನ ಕ್ಷಮಿಸಿಬಿಡಿ ಅಮ್ಮ. ಸುಮೇಧನ ಜೊತೆ ಇರಿ. ಅಮ್ಮ ನಿಮ್ಮ ಬಗ್ಗೆ ಕೇರ್ ತೆಗೆದುಕೊಳ್ಳಿ. ನನ್ನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ತೀವ್ರ ನೋವಿನಲ್ಲಿದ್ದೇನೆ. ನಾನು ಏನನ್ನೂ ಮಾಡಿಲ್ಲ. ಎಂದೂ ನಿನ್ನನ್ನು ಅರ್ಥಮಾಡಿಕೊಂಡಿಲ್ಲ. ನನ್ನನ್ನು ಕ್ಷಮಿಸಿಬಿಡು ಅಮ್ಮ' ಎಂದು ಹೇಳಿದ್ದಾನೆ.
ಈ ವಿಡಿಯೊ ಕ್ಲಿಪ್ ಅನ್ನು ಕುಟುಂಬಕ್ಕೆ ಕಳುಹಿಸಿದ ವಿದ್ಯಾರ್ಥಿ, ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 3 ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪದ ಮೇರೆಗೆ ಮೇ 12ರಂದು ಪರೀಕ್ಷೆ ರದ್ದುಗೊಳಿಸಲಾಗಿತ್ತು. ಕೇಂದ್ರ ತನಿಖಾ ದಳ(ಸಿಬಿಐ) ಈ ಪ್ರಕರಣದ ತನಿಖೆ ನಡೆಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿನ ಪ್ರಮುಖ ಆರೋಪಿಯನ್ನು ಬಂಧಿಸಿತ್ತು. ಜೂನ್ 21 ರಂದು ಮರು ಪರೀಕ್ಷೆ ನಡೆಸಲಾಯಿತು.

