ಚೆನ್ನೈ: ಡಿಎಂಕೆಯ ಹಿರಿಯ ನಾಯಕ, ತಮಿಳುನಾಡಿನ ಮಾಜಿ ಸಚಿವ ಇ.ವಿ ವೇಲು ಅವರಿಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಗುರುವಾರ ಶೋಧ ಕಾರ್ಯಾಚರಣೆ ನಡೆಸಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರು ಮುಖ್ಯಮಂತ್ರಿಯಾಗಿದ್ದ 2021-2026ರ ಅವಧಿಯಲ್ಲಿ ವೇಲು ಅವರು ಲೋಕೋಪಯೋಗಿ, ಹೆದ್ದಾರಿಗಳು ಮತ್ತು ಸಣ್ಣ ಬಂದರು ಖಾತೆ ಸಚಿವರಾಗಿದ್ದರು.
'ತನಿಖೆಗೆ ವೇಲು ಅವರು ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡುತ್ತಾರೆ. ಈ ಶೋಧ ಕಾರ್ಯಾಚರಣೆಯು ರಾಜಕೀಯ ಪ್ರೇರಿತವಾಗಿದೆ. ರಾಜಕೀಯ ದ್ವೇಷದಿಂದ ನಮ್ಮ ವಿರುದ್ಧ ದಾಖಲಿಸಿದ ಯಾವುದೇ ಭ್ರಷ್ಟಾಚಾರ ಪ್ರಕರಣದಲ್ಲೂ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ' ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
'ಡಿಎಂಕೆ ಆಡಳಿತ ಪಕ್ಷದ ಬೆದರಿಕೆಗೆ ಮಣಿಯುವ ಪಕ್ಷವಲ್ಲ. ಇದಕ್ಕಿಂತ ಹೆಚ್ಚಿನ ದಬ್ಬಾಳಿಕೆಯನ್ನೂ ನಾವು ಎದುರಿಸಿದ್ದೇವೆ. ಇದನ್ನೂ ಯಶಸ್ವಿಯಾಗಿ ಎದುರಿಸಿ ಜಯ ಗಳಿಸುತ್ತೇವೆ' ಎಂದೂ ಹೇಳಿದ್ದಾರೆ.

