ಕಾಬೂಲ್ : ಅಫ್ಘಾನಿಸ್ತಾನವನ್ನು ಗುರಿಯಾಗಿಸಿ ಮಂಗಳವಾರ ತಡರಾತ್ರಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ ಕನಿಷ್ಠ 19 ಮಂದಿ ಮೃತಪಟ್ಟಿದ್ದು, ಇತರ 14 ಮಂದಿ ಗಾಯಗೊಂಡಿರುವುದಾಗಿ ತಾಲಿಬಾನ್ ಮುಖ್ಯ ವಕ್ತಾರ ಝಬಿಹುಲ್ಲ ಮುಜಾಹಿದ್ ಹೇಳಿದ್ದಾರೆ.
ಗಡಿಪ್ರದೇಶದ ಬಳಿಯ ಖೋಸ್ಟ್, ಕುನಾರ್ ಮತ್ತು ಪಕ್ತಿಕಾ ಪ್ರಾಂತಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆದಿದ್ದು 11 ಮಕ್ಕಳು, ಓರ್ವ ಮಹಿಳೆ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಖೋಸ್ಟ್ ಪ್ರಾಂತದ ಸ್ಪೆರಾ ಜಿಲ್ಲೆಯಲ್ಲಿ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿದ್ದರೆ. ಪಕ್ತಿಕಾ ಪ್ರಾಂತದ ಬರ್ಮಲ್ ಜಿಲ್ಲೆಯಲ್ಲಿ ಮನೆಯನ್ನು ಗುರಿಯಾಗಿಸಿ ನಡೆದ ಮತ್ತೊಂದು ದಾಳಿಯಲ್ಲಿ ಮೂವರು, ಪ್ರತ್ಯೇಕ ದಾಳಿಯಲ್ಲಿ 7 ಮಂದಿ ಮೃತಪಟ್ಟಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

