ತುಳಸಿ ಗಬ್ಬಾರ್ಡ್ ಅವರು ಶುಕ್ರವಾರ ಬಹಿರಂಗಪಡಿಸಿದ ತಮ್ಮ ಇಲಾಖೆಯ ಪರಿಷ್ಕೃತವಲ್ಲದ ದಾಖಲೆಯೊಂದರಲ್ಲಿ ಈ ವಿಷಯವನ್ನು ಬಯಲಿಗೆಳೆದಿದ್ದಾರೆ.
ಕೋವಿಡ್-19 ಉಗಮದ ಕುರಿತು ಮಾಹಿತಿಯನ್ನು ಬಚ್ಚಿಡಲು ಫೌಸಿ ಅವರು ಚೀನಿ ಬೇಹುಗಾರಿಕಾ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದರು ಮತ್ತು 2024ರಲ್ಲಿ ಈ ಬಗ್ಗೆ ನಡೆದ ವಿಚಾರಣೆ ಸಂದರ್ಭ ಅಮೆರಿಕ ಕಾಂಗ್ರೆಸ್ ಗೆ ತಪ್ಪು ಮಾಹಿತಿಗಳನ್ನು ನೀಡಿದ್ದರು ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.
ವೈರಸ್ನ ಉಗಮ ಹಾಗೂ ಸಂಶೋಧನೆಗೆ ಹಣ ಪೂರೈಕೆ ಮಾಡುವಲ್ಲಿ ತನ್ನ ಪಾತ್ರದ ಕುರಿತ ಮಾಹಿತಿಗಳನ್ನು ಮುಚ್ಚಿಹಾಕಲು ಫೌಸಿ ಅವರು ಬೇಹುಗಾರಿಕಾ ದಳದಲ್ಲಿರುವ 'ರಾಜಕೀಯ ನಾಯಕತ್ವದ' ಜೊತೆ ಕೆಲಸ ಮಾಡಿದ್ದರು ಎಂದು ಗಬ್ಬಾರ್ಡ್ ಮಾಹಿತಿ ನೀಡಿದ್ದಾರೆ.
ವುಹಾನ್ ವಿವಿಯ ವೈರಾಣು ಕೇಂದ್ರದಲ್ಲಿ ಸೋರಿಕೆಯಾದ ವೈರಸ್, ಆನಂತರ ಜಗತ್ತಿನಾದ್ಯಂತ ಹರಡಿದ ಕೊರೊನಾ ವೈರಸ್ ಗೆ ಮೂಲವೆಂಬ ಊಹಾಪೋಹಗಳಿಗೆ ಗಬ್ಬಾರ್ಡ್ ಬಹಿರಂಗಪಡಿಸಿದ ಮಾಹಿತಿ ಬಲ ನೀಡಿದೆ. ಇದಕ್ಕೂ ಮುನ್ನ ಚೀನಾವು ವನ್ಯಜೀವಿ ಮಾರುಕಟ್ಟೆಯಿಂದಲೇ ಈ ಸೋಂಕು ಹರಡಿತ್ತೆಂದು ವಾದಿಸಿತ್ತು.
''ಕೋವಿಡ್-19 ಸಾಂಕ್ರಾಮಿಕವು ಲಕ್ಷಾಂತರ ಅಮೆರಿಕನ್ನರಿಗೆ ಹಾಗೂ ಜಗತ್ತಿನಾದ್ಯಂತ ಸಂಕಷ್ಟ ಹಾಗೂ ನೋವನ್ನುಂಟು ಮಾಡಿದೆ. ಹಲವು ವರ್ಷಗಳಿಂದ ಹೇಳುತ್ತಲೇ ಬಂದ ಸುಳ್ಳುಗಳು, ಸೆನ್ಸಾರ್ಶಿಪ್ ಗಳು ಹಾಗೂ ಮರೆಮಾಚುವಿಕೆಗಳ ಆನಂತರ ಅಮೆರಿಕದ ಜನತೆ ಪಾರದರ್ಶಕತೆ, ಸತ್ಯ ಹಾಗೂ ಉತ್ತರದಾಯಿತ್ವವನ್ನು ಕೇಳುತ್ತಿದ್ದಾರೆ'' ಎಂದು ಗಬ್ಬಾರ್ಡ್ ತಿಳಿಸಿದ್ದಾರೆ.

