ರಕ್ಷಣಾ ಮೂಲಗಳ ಪ್ರಕಾರ, ಈ ಬೃಹತ್ ಖರೀದಿ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದ್ದು, ಮುಂದಿನ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಡ್ರೋನ್‌ಗಳು ಭಾರತೀಯ ಸೇನೆ ಸೇರಲಿವೆ.
ಇತ್ತೀಚೆಗಷ್ಟೇ ಸುಮಾರು 3,000 ಕೋ. ರೂ. ಮೌಲ್ಯದ ತಾಂತ್ರಿಕ ಡ್ರೋನ್‌ಗಳ ಖರೀದಿಗೆ ಆದೇಶ ನೀಡಲಾಗಿತ್ತು. ಇದರ ಬೆನ್ನಲ್ಲೇ ಈ ಹೊಸ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಈ ಹಂತದ ಖರೀದಿ ವೆಚ್ಚ 20 ಸಾವಿರ ಕೋ.ರೂ.ಗಳನ್ನು ಮೀರಬಹುದು ಎನ್ನಲಾಗಿದೆ.
ಐಜಿ ಡಿಫೆನ್ಸ್‌ನ ಹಿರಿಯ ವಿಪಿ ಮತ್ತು ನಿವೃತ್ತ ಮೇಜರ್ ಜನರಲ್ ಆರ್.ಸಿ. ಪಧಿ ಅವರು ಸುದ್ಧಿ ಸಂಸ್ಥೆಯೊಂದರ ಜೊತೆ ಮಾತನಾಡಿ, ''ಯೋಜಿತ ಡ್ರೋನ್ ಖರೀದಿಯು ಭಾರತದ ರಕ್ಷಣಾ ಆಧುನೀಕರಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ'' ಎಂದಿದ್ದಾರೆ.
''ಆಧುನಿಕ ಯುದ್ಧ ಭೂಮಿಯಲ್ಲಿ ಡ್ರೋನ್‌ಗಳು ಸೈನಿಕ ಶಕ್ತಿಯ ಪರಿಣಾಮವನ್ನು ಹಲವು ಪಟ್ಟು ಹೆಚ್ಚಿಸುತ್ತವೆ. ಇವು ನಿರಂತರ ಬುದ್ಧಿ ಮತ್ತೆ, ಕಣ್ಗಾವಲು, ಗೂಢಚರ್ಯೆ ಮತ್ತು ನಿಖರವಾದ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಸರಕಾರ ತ್ವರಿತ ಖರೀದಿ ಮತ್ತು ದೇಶೀಯ ಮೂಲಗಳಿಗೆ ಒತ್ತು ನೀಡುತ್ತಿರುವುದು ಕೇವಲ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುವುದಲ್ಲದೆ, ಭಾರತದ ರಕ್ಷಣಾ ಉದ್ಯಮದೊಳಗೆ ನಾವಿನ್ಯತೆ, ಉತ್ಪಾದನಾ ಸಾಮರ್ಥ್ಯ ಮತ್ತು ತಾಂತ್ರಿಕ ಸಾವಲಂಬನೆಯನ್ನು ಉತ್ತೇಜಿಸುತ್ತದೆ'' ಎಂದು ಅವರು ಹೇಳಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಡೆದ 'ಆಪರೇಷನ್ ಸಿಂಧೂರ್' ಮಾತ್ರವಲ್ಲದ ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಇರಾನ್-ಅಮೆರಿಕ ಸಂಘರ್ಷಗಳು ಕಡಿಮೆ ವೆಚ್ಚದ ಡ್ರೋನ್‌ಗಳು ಕೂಡ ಯುದ್ಧ ಭೂಮಿಯಲ್ಲಿ ಹೇಗೆ ಪರಿಣಾಮ ಬೀರಬಲ್ಲವು ಎಂಬುದನ್ನು ತೋರಿಸಿಕೊಟ್ಟಿವೆ.

