ಕೋಲ್ಕತ್ತ: ಹೋರಾಟ ರಾಜಕೀಯದ ಮೂಲಕ ಪಶ್ಚಿಮ ಬಂಗಾಳದ ರಾಜಕೀಯದ ನಾಡಿಮಿಡಿತವಾಗಿದ್ದ ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಫಲಿತಾಂಶ ಹೊರಬಿದ್ದಿರುವ ಬೆನ್ನಲ್ಲೇ ಭಾರಿ ಆಘಾತ ಎದುರಾಗಿದೆ.
ನಿಖರವಾಗಿ ಒಂದು ತಿಂಗಳ ಹಿಂದೆ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕಿಯಾಗಿದ್ದರು.
ಆದರೆ ಬಿಜೆಪಿ ವಿರುದ್ಧ ಎದುರಾದ ಸೋಲು ಇಡೀ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.
ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧದ ಸೋಲು ವೈಯಕ್ತಿಕವಾಗಿ ಹಿನ್ನಡೆಗೆ ಕಾರಣವಾಯಿತು.
ಅಲ್ಲದೆ ವಿಧಾನಸಭೆಯಲ್ಲಿ ಟಿಎಂಸಿಯ ಸಂಖ್ಯಾಬಲ 80ಕ್ಕೆ ಇಳಿಯಿತು. ಇದರಿಂದಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು. 2021ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ 215 ಸ್ಥಾನಗಳನ್ನು ಗೆದ್ದಿತ್ತು ಎಂಬುದು ಗಮನಾರ್ಹ.
ಮಮತಾ ಬ್ಯಾನರ್ಜಿ ನೇತೃತ್ವದ TMC ಪಕ್ಷದ ವಿಭಜನೆಯನ್ನು ಬಿಜೆಪಿ ಏಕೆ ಬಯಸುತ್ತಿಲ್ಲ?ಟಿಎಂಸಿ ಶಾಸಕರು ಮಮತಾ ಬ್ಯಾನರ್ಜಿ ಜೊತೆಗಿರಲಿದ್ದಾರೆ: ಸೋಭಾಂದೇಬ್ ಚಟ್ಟೋಪಾಧ್ಯಾಯ1998ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದ ಮಮತಾಗೆ ಈಗ ಚುನಾವಣೆಯ ಸೋಲಿನ ಬೆನ್ನಲ್ಲೇ ಬಂಡಾಯ ಬಿಕ್ಕಟ್ಟು ಎದುರಾಯಿತು. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಸೋಲುಂಡ ಬಳಿಕ ಪಕ್ಷದೊಳಗೆ 'ಬಂಡಾಯ'ದ ಬೆಳವಣಿಗೆಗಳು ನಡೆದಿದ್ದವು. ಈಗ ಪಕ್ಷವು ಇಬ್ಭಾಗವಾಗಿದೆ.
ಪಕ್ಷದ ಉಚ್ಚಾಟಿತ ಶಾಸಕ ರುತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ನೇಮಿಸಬೇಕು ಎಂದು ಕೋರಿ 58 ಬಂಡಾಯ ಶಾಸಕರು ನೀಡಿದ ಪತ್ರವನ್ನು ಸ್ಪೀಕರ್ ಪುರಸ್ಕರಿಸಿದ್ದಾರೆ.
'ನಮ್ಮದೇ ನಿಜವಾದ ಟಿಎಂಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ನಮ್ಮದೇ ಪ್ರಮುಖ ವಿರೋಧ ಪಕ್ಷ' ಎಂದು ಶಾಸಕ ರುತಬ್ರತಾ ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಎನ್‌ಸಿಪಿ ಪಕ್ಷಗಳು ಇಬ್ಭಾಗವಾದ ಮಾದರಿಯಲ್ಲಿಯೇ ಟಿಎಂಸಿಯಲ್ಲಿ ಕೂಡ ಬೆಳವಣಿಗೆಗಳು ನಡೆದವು. ಈ ಮೂಲಕ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಮೂಲ ಪಕ್ಷವು ಈಗ ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಂತಾಗಿದೆ.

ಟಿಎಂಸಿ
ಕೆಲವು ದಿನಗಳ ಹಿಂದೆಯಷ್ಟೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರೆಂದು ಆರೋಪಿಸಿ ರುತಬ್ರತಾ ಬ್ಯಾನರ್ಜಿ ಹಾಗೂ ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಬಂಡಾಯ ಶಾಸಕರು ವಿಧಾನಸಭೆಯಲ್ಲಿ ಬುಧವಾರ ಸಭೆ ನಡೆಸಿದ್ದರು. ಸಭೆಯಲ್ಲಿ 58 ಶಾಸಕರು ಹಾಜರಿದ್ದರು. ಸಭೆಯ ಬಳಿಕ ಈ ಎಲ್ಲ ಶಾಸಕರ ಸಹಿ ಇದ್ದ ಪತ್ರವನ್ನು ಸ್ಪೀಕರ್ ಅವರಿಗೆ ನೀಡಲಾಯಿತು. ಮಮತಾಗೆ ನಿಷ್ಠರಾಗಿರುವ ಕೆಲವು ನಾಯಕರು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಎಡರಂಗಕ್ಕೆ ಪರ್ಯಾಯ ಅಲೆಯಾಗಿ ಹುಟ್ಟಿಕೊಡಿದ್ದ ಟಿಎಂಸಿ 2011ರಲ್ಲಿ 184 ಸ್ಥಾನಗಳನ್ನು ಗೆದ್ದಿತ್ತು. ಆ ಮೂಲಕ 34 ವರ್ಷಗಳ ಎಡರಂಗದ ಆಡಳಿತವನ್ನು ಕೊನೆಗೊಳಿಸಿತ್ತು. 2016ರಲ್ಲಿ 211 ಸ್ಥಾನಗಳೊಂದಿಗೆ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. 2021ರಲ್ಲಿ ಪಕ್ಷವು ಅಭೂತಪೂರ್ವ ಸಾಧನೆ ಮಾಡಿದ್ದಲ್ಲದೆ 294 ಸ್ಥಾನಗಳ ಪೈಕಿ 215ರಲ್ಲಿ ಗೆಲುವು ಸಾಧಿಸಿತ್ತು.
ಸುಮಾರು ಮೂರು ದಶಕಗಳ ಸಾರ್ವಜನಿಕ ಜೀವನದಲ್ಲಿ ಮಮತಾ ಬ್ಯಾನರ್ಜಿ ಇದುವರೆಗೆ ಎದುರಿಸಿದಕ್ಕಿಂತ ಭಿನ್ನವಾದ ಸವಾಲನ್ನು ಈಗ ಎದುರಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಎದುರಾದ ಹಿನ್ನಡೆ, ಕೇಂದ್ರಿಯ ತನಿಖಾ ಸಂಸ್ಥೆಗಳ ದಾಳಿ, ಸಂಘಟನೆಯಲ್ಲಿ ಎದುರಾದ ಭಿನ್ನಮತ ಹಾಗೂ ಸೈದ್ಧಾಂತಿಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ ಈಗ ಎದುರಾಗಿರುವ ಬಿಕ್ಕಟ್ಟು ಪಕ್ಷದ ಮೇಲಿನ ಸಂಪೂರ್ಣ ಹಿಡಿತವನ್ನು ಕಳೆದುಕೊಳ್ಳುವಂತೆ ಮಾಡಿದೆ.
ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಪಕ್ಷವು ಇಬ್ಘಾಗವಾದಾಗ ಅಚ್ಚರಿಯೇನು ಇರಲಿಲ್ಲ. ಬಿಜೆಪಿಯು ಹಣ, ಬೆದರಿಕೆ ತಂತ್ರವನ್ನು ಉಪಯೋಗಿಸಿ ತನ್ನ ಪಕ್ಷದಲ್ಲಿ ವಿಭಜನೆಗೆ ಯತ್ನಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ. ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಪ್ರತಿಕ್ರಿಯಿಸಿದ ಅವರು ಬಂಗಾಳ ಟಿಎಂಸಿಯನ್ನು ಒಡೆಯಲು ಹಾಗೂ ವಿರೋಧ ಪಕ್ಷವನ್ನು ದುರ್ಬಲಗೊಳಿಸಲು ಸಂಘಟಿತ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ, ಬಂಡಾಯ ಎದ್ದವರನ್ನು ಬಿಜೆಪಿ ತಕ್ಷಣಕ್ಕೆ ತನ್ನತ್ತ ಸೆಳೆಯಲು ಸಾಧ್ಯತೆ ಇಲ್ಲ. ವಿಶ್ಲೇಷಕರು ಇದಕ್ಕೆ ಮಹಾರಾಷ್ಟ್ರದ ಉದಾಹರಣೆಯನ್ನು ನೀಡುತ್ತಾರೆ. ಅಲ್ಲಿ ಒಡೆದು ಹೋದ ಬಣವು ಆಡಳಿತ ಪಕ್ಷದಲ್ಲಿ ನೇರವಾಗಿ ವಿಲೀನಗೊಳ್ಳುವ ಬದಲು ಪ್ರತ್ಯೇಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತ್ತು. ಬಂಗಾಳದಲ್ಲೂ 'ಏಕನಾಥ ಶಿಂದೆ ಮಾದರಿ' ಆಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.
70ರ ಹರೆಯ ದಾಟಿರುವ ಮಮತಾ ಮತ್ತದೇ ಹುರುಪಿನೊಂದಿಗೆ ರಾಜ್ಯದೆಲ್ಲೆಡೆ ತಿರುಗಾಡಿ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದೆ. ಆದರೂ ಯಾವ ಹಂತದಲ್ಲೂ ಮಮತಾ ಅವರನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಮತಾ ಬ್ಯಾನರ್ಜಿ
ಸಮಕಾಲೀನ ರಾಜಕೀಯದಲ್ಲಿ ಕೆಲವೇ ಕೆಲವು ನಾಯಕರು ತಮ್ಮ ಸಾಮರ್ಥ್ಯವನ್ನು ಬಿಂಬಿಸಿದ್ದಾರೆ. 34 ವರ್ಷಗಳ ಎಡರಂಗ ಸರ್ಕಾರವನ್ನು ಉರುಳಿಸಿದ್ದರಲ್ಲದೆ ಪದೇ ಪದೇ ಎದುರಾದ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ನಿಂತಿದ್ದರು. ಆ ಮೂಲಕ ಅತ್ಯಂತ ಪ್ರಭಾವಶಾಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದರು.
ಹುಟ್ಟು ಹೋರಾಟಗಾರ್ತಿಯಾಗಿರುವ ಮಮತಾ ಅವರ ಸಾಧನೆಯನ್ನು ಮೆಲುಕು ಹಾಕಿದಾಗ ಈಗ ಉಂಟಾಗಿರುವ ಬಿಕ್ಕಟ್ಟಿನಿಂದ ಹೊರಬರಲಿದ್ದಾರೆ ಎಂದು ಟಿಎಂಸಿಯ ಹಿರಿಯ ನಾಯಕಿ ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯದಲ್ಲಿ ಇಂತಹ ಬಿಕ್ಕಟ್ಟು ತಾತ್ಕಾಲಿಕ. ಒಂದು ದಶಕದ ಹಿಂದೆ ಬಿಜೆಪಿಗೆ ಕೇವಲ 3 ಸ್ಥಾನಗಳಿತ್ತು. ಈಗ ಅವರು ಎಲ್ಲಿದ್ದಾರೆಂದು ನೋಡಿ. ಬಂಡಾಯ ಶಾಸಕರು ಪಕ್ಷಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಬಿಕ್ಕಟ್ಟನ್ನು ನಿಭಾಯಿಸಲು ಮಮತಾ ವಿಫಲರಾದರೆ ಬಂಗಾಳದಲ್ಲಿ ಎಡರಂಗದ ಪತನದಂತೆಯೇ ನಾಟಕೀಯ ರೀತಿಯಲ್ಲಿ ಮತ್ತೊಂದು ಸಾಮ್ರಾಜ್ಯದ ಪತನವಾಗಲಿದೆ.

