ನವದೆಹಲಿ: ಭಾರತದಲ್ಲಿಯೇ ತಯಾರಾದ ಮೊದಲ ಸಿ- 295 ಮಿಲಿಟರಿ ಸಾರಿಗೆ ವಿಮಾನವು ತನ್ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಬುಧವಾರ ತಿಳಿಸಿದೆ.
ವಾಯುಪಡೆಯು, ಸುಮಾರು ₹21,935 ಕೋಟಿ ವೆಚ್ಚದಲ್ಲಿ ಒಟ್ಟು 56 'ಸಿ - 295' ವಿಮಾನಗಳನ್ನು ಖರೀದಿಸುತ್ತಿದೆ.
ಇವುಗಳ ಪೈಕಿ 40 ವಿಮಾನಗಳನ್ನು ಗುಜರಾತ್ನ ವಡೋದರಾದಲ್ಲಿರುವ ಉತ್ಪಾದನಾ ಘಟಕದಲ್ಲಿ 'ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್' ಸಂಸ್ಥೆಯು 'ಏರ್ಬಸ್' ಕಂಪನಿಯ ಸಹಯೋಗದೊಂದಿಗೆ ತಯಾರಿಸಲಾಗುತ್ತದೆ.
ಈ ಯಶಸ್ಸಿಗೆ ಕಾರಣರಾದ ಇಡೀ ತಂಡಕ್ಕೆ ವಾಯುಪಡೆ ಅಭಿನಂದನೆ ಸಲ್ಲಿಸಿದೆ. ಈ ಸಾಧನೆಯು ಭಾರತದ ವಿಮಾನಯಾನ ತಂತ್ರಜ್ಞಾನದ ಬೆಳವಣಿಗೆಯನ್ನು ತೋರಿಸುತ್ತದೆ ಹಾಗೂ ಪ್ರಧಾನಿ ಮೋದಿ ಅವರ 'ಆತ್ಮನಿರ್ಭರ ಭಾರತ' ಯೋಜನೆ ಅಡಿಯಲ್ಲಿ ಸ್ವದೇಶಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ವಾಯುಪಡೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದೆ.

