ನವದೆಹಲಿ: ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ಒಂದರಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಸಮ್ಮತಿರಹಿತ ಲೈಂಗಿಕ ಕ್ರಿಯೆಯನ್ನು ವೈಭವೀಕರಿಸಿದ ಆರೋಪದ ಮೇಲೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಮತ್ತು ವೆಬ್ ಡೆವಲಪರ್ ಹಿಮಾಂಶು ಜಂಗ್ರಾ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಗುರುವಾರ (ಜೂನ್ 11) ಸಮನ್ಸ್ ಜಾರಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದ ವಿಡಿಯೊ ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ಅವರು ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ಬಗ್ಗೆ ತಕ್ಷಣವೇ ತನಿಖೆ ನಡೆಸಿ ಏಳು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
'ಹರಿಯಾಣದ ಗುರುಗ್ರಾಮದಲ್ಲಿ ನಡೆದ ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಹಾಸ್ಯದ ರೂಪದಲ್ಲಿ ವೈಭವೀಕರಿಸಲಾಗಿದೆ. ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡಿ, ಅದಕ್ಕೆ ಚಪ್ಪಾಳೆ ಗಿಟ್ಟಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ' ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 22ರಂದು ಸಂಜೆ 4 ಗಂಟೆಗೆ ಈ ಪ್ರಕರಣದ ಅಧಿಕೃತ ವಿಚಾರಣೆ ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಮಹಿಳೆಯರ ಘನತೆಗೆ ಧಕ್ಕೆ: ಆಯೋಗದ ಕಳವಳ
ವಿಡಿಯೊದಲ್ಲಿನ ಸಂಭಾಷಣೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆಯೋಗ, 'ಮಹಿಳೆಯರ ಒಪ್ಪಿಗೆ, ಘನತೆ ಮತ್ತು ಶಾರೀರಿಕ ಸ್ವಾಯತ್ತತೆಗೆ ಕುಂದು ಉಂಟುಮಾಡುವ ಇಂತಹ ನಡವಳಿಕೆಗಳನ್ನು ಹಾಸ್ಯದ ಹೆಸರಿನಲ್ಲಿ ವೈಭವೀಕರಿಸುವುದು ಮಹಿಳೆಯರ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಹಾಸ್ಯದ ಹೆಸರಿನಲ್ಲಿ ಮಹಿಳೆಯರ ಭಾವನೆಗೆ ಅಗೌರವ ತೋರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಸಂವಿಧಾನ ಮತ್ತು ಕಾನೂನು ಮಹಿಳೆಯರಿಗೆ ನೀಡಿರುವ ಸಮಾನತೆ ಮತ್ತು ಸುರಕ್ಷತೆಯ ಹಕ್ಕುಗಳಿಗೆ ಸಂಪೂರ್ಣ ವಿರೋಧವಾಗಿದೆ ಎಂದು ಆಯೋಗ ಖಂಡಿಸಿದೆ.
ಏನಿದು '₹370 ಬಿರಿಯಾನಿ' ವಿವಾದ?
ಹಿಮಾಂಶು ಜಂಗ್ರಾ ಎಂಬಾತ ತಾನು ಯುವತಿಯೊಬ್ಬಳ ಜೊತೆ ಡೇಟಿಂಗ್ಗೆ ಹೋಗಿದ್ದ ಕಥೆಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದ. ಅಲ್ಲಿ ತಾನು ಚಿಕನ್ ಬಿರಿಯಾನಿಗಾಗಿ ₹370 ಖರ್ಚು ಮಾಡಿದ್ದಾಗಿ ಹೇಳಿದ್ದ. ತದನಂತರ ಆ ಯುವತಿ ತನ್ನನ್ನು ಮನೆಗೆ ಬಿಡುವಂತೆ ಕೇಳಿದಾಗ, ತಾನು ಬಿರಿಯಾನಿಗೆ ಖರ್ಚು ಮಾಡಿದ ಹಣಕ್ಕೆ ಬದಲಾಗಿ ಆಕೆಯಿಂದ ಲೈಂಗಿಕತೆಗೆ ಸಮ್ಮತಿಯನ್ನು ನಿರೀಕ್ಷಿಸಿದ್ದಾಗಿ ದ್ವಂದ್ವಾರ್ಥದಲ್ಲಿ ಹೇಳಿದ್ದ. ಈ ಮಾತಿಗೆ ವೇದಿಕೆಯಲ್ಲಿದ್ದ ಹಾಸ್ಯನಟ ಪ್ರಣೀತ್ ಜೊತೆಗೆ ನೆರೆದಿದ್ದ ಜನರು ಸಹ ಜೋರಾಗಿ ನಕ್ಕಿದ್ದರು.
ಇದೇ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರ ಆಕ್ರೋಶಕ್ಕೆ ಹೆದರಿ ಇಬ್ಬರೂ ಕ್ಷಮೆಯಾಚಿಸಿದ್ದಾರಲ್ಲದೆ, ಹಿಮಾಂಶು ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ಇದೇ ವಿವಾದದ ಹಿನ್ನೆಲೆಯಲ್ಲಿ ಗುರುಗ್ರಾಮದ ಪ್ರಮುಖ ಕಂಪನಿಯೊಂದು ಹಿಮಾಂಶು ಜಂಗ್ರಾನನ್ನು ಕೆಲಸದಿಂದ ವಜಾಗೊಳಿಸಿದೆ.

